ADVERTISEMENT

ಬೆಂಗಳೂರು: ಸಿಡಿಲು– ಗುಡುಗು ಅಬ್ಬರ: ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 20:00 IST
Last Updated 31 ಆಗಸ್ಟ್ 2023, 20:00 IST
<div class="paragraphs"><p>ಮೈಸೂರು ರಸ್ತೆಯಲ್ಲಿರುವ ಸ್ಯಾಟ್‌ಲೈಟ್ ಬಸ್‌ ನಿಲ್ದಾಣ ಬಳಿ ಗುರುವಾರ ರಾತ್ರಿ ಸುರಿಯುತ್ತಿದ್ದ ಮಳೆಯಲ್ಲಿ ವಾಹನಗಳು ಸಂಚರಿಸಿದವು</p></div>

ಮೈಸೂರು ರಸ್ತೆಯಲ್ಲಿರುವ ಸ್ಯಾಟ್‌ಲೈಟ್ ಬಸ್‌ ನಿಲ್ದಾಣ ಬಳಿ ಗುರುವಾರ ರಾತ್ರಿ ಸುರಿಯುತ್ತಿದ್ದ ಮಳೆಯಲ್ಲಿ ವಾಹನಗಳು ಸಂಚರಿಸಿದವು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ನಗರದಲ್ಲಿ ಗುರುವಾರ ರಾತ್ರಿ ಸಿಡಿಲು–ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಪ್ರಮುಖ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು.

ADVERTISEMENT

ನಗರದಲ್ಲಿ ಹಲವು ದಿನಗಳಿಂದ ಮಳೆ ಆಗಿರಲಿಲ್ಲ. ಇದರಿಂದಾಗಿ ಸೆಕೆ ಹೆಚ್ಚಾಗಿತ್ತು. ಆಗಾಗ ಮೋಡ ಮುಸುಕಿದ ವಾತಾವರಣ ಕಂಡುಬಂದರೂ ಮಳೆ ಸುರಿದಿರಲಿಲ್ಲ.

ಗುರುವಾರವೂ ಸೆಕೆ ಹೆಚ್ಚಿತ್ತು. ಬಹುತೇಕ ಕಡೆಗಳಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೆ ಮೋಡ ಕವಿದ ವಾತಾವರಣವಿತ್ತು. ರಾತ್ರಿ 8 ಗಂಟೆಯ ನಂತರ ನಗರದ ಹಲವು ಪ್ರದೇಶಗಳಲ್ಲಿ ಮಳೆ ಸುರಿಯಲಾರಂಭಿಸಿತ್ತು.

ವಿದ್ಯಾರಣ್ಯಪುರ, ಕೊಡಿಗೇಹಳ್ಳಿ, ವಿ. ನಾಗೇನಹಳ್ಳಿ, ಯಲಹಂಕ ಸೇರಿದಂತೆ ಬೆಂಗಳೂರು ಉತ್ತರ ಭಾಗದಲ್ಲಿ ಜೋರು ಮಳೆ ಆಯಿತು. ಸಿಡಿಲು ಹಾಗೂ ಗುಡುಗಿನ ಅಬ್ಬರವೂ ಹೆಚ್ಚಿತ್ತು.

ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಗೊಟ್ಟಿಗೆರೆ, ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್, ಜೆ.ಪಿ.ನಗರ, ಸರ್ಜಾಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆ ಸುರಿಯಿತು.

ಕೆಂಗೇರಿ, ರಾಜರಾಜೇಶ್ವರಿನಗರ, ನಾಯಂಡನಹಳ್ಳಿ, ದೀಪಾಂಜಲಿನಗರ, ಗಿರಿನಗರ, ಹನುಮಂತನಗರ, ಬಸವನಗುಡಿ, ಬನಶಂಕರಿ, ಜಯನಗರ, ಮಡಿವಾಳ, ಚಿಕ್ಕಪೇಟೆ, ಗಾಂಧಿನಗರ, ಮೆಜೆಸ್ಟಿಕ್, ಶೇಷಾದ್ರಿಪುರ, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್, ಸಂಜಯನಗರ, ಹೆಬ್ಬಾಳ, ಆರ್‌.ಟಿ.ನಗರ, ವಸಂತನಗರ, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕನಗರ, ವಿವೇಕನಗರ, ಕೋರಮಂಗಲ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಸುರಿಯಿತು.

ಮನೆಗಳಿಗೆ ನುಗ್ಗಿದ ನೀರು: ಯಲಹಂಕ ಬಳಿಯ ಭದ್ರಪ್ಪ ಲೇಔಟ್‌ನ ಕೆಲ ಮನೆಗಳಿಗೆ ನೀರು ನುಗ್ಗಿತ್ತು. 3 ಅಡಿಯಿಂದ 4 ಅಡಿಯಷ್ಟು ನೀರು ಮನೆಯೊಳಗೆ ಹರಿಯಿತು. ಮನೆಯೊಳಗಿದ್ದ ನಿವಾಸಿಗಳು, ನೀರು ಹೊರಹಾಕುವುದರಲ್ಲಿ ನಿರತರಾಗಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಮನೆಯ ಸಾಮಗ್ರಿ ಹಾಗೂ ಪೀಠೋಪಕರಣಗಳು ನೀರಿನಲ್ಲಿದ್ದವು. ವೃದ್ಧರು, ಮಕ್ಕಳು ನೀರಿನಲ್ಲಿ ಸಾಗಿ ಸುರಕ್ಷಿತ ಸ್ಥಳಕ್ಕೆ ತಲುಪಿದರು.
‘ಕಾಲುವೆಗಳು ಹೂಳು ತುಂಬಿಕೊಂಡಿವೆ. ಧಾರಾಕಾರ ಮಳೆ ಆಗಿದ್ದರಿಂದ, ನೀರು ರಸ್ತೆಯಲ್ಲಿ ಹರಿದು ಮನೆಗಳಿಗೆ ನುಗ್ಗಿದೆ’ ಎಂದು ನಿವಾಸಿಗಳು ಹೇಳಿದರು.

‘ಕೆಲ ಮನೆಗಳಿಗೆ ದೂರು ಬರುತ್ತಿದ್ದಂತೆ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಹಿಸಲಾಗಿದೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ಕೋರಮಂಗಲ ಬಳಿ ಮರವೊಂದು ಉರುಳಿಬಿದ್ದಿತ್ತು. ಇದರಿಂದಾಗಿ ವಾಹನಗಳ ಸಂಚಾರ ಕೆಲ ಹೊತ್ತು ಬಂದ್ ಆಗಿತ್ತು. ಸ್ಥಳೀಯರು ಹಾಗೂ ಬಿಬಿಎಂಪಿ ಸಿಬ್ಬಂದಿ, ಮರವನ್ನು ತೆರವು ಮಾಡಿದ ನಂತರ ವಾಹನಗಳ ಸಂಚಾರ ಯಥಾಸ್ಥಿತಿಗೆ ಮರಳಿತು.

ರಸ್ತೆಯಲ್ಲಿ ನೀರು ಹರಿದಿದ್ದರಿಂದ, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಹೆಬ್ಬಾಳ ಮೇಲ್ಸೇತುವೆ, ಜಯಮಹಲ್ ರಸ್ತೆ, ಅನಿಲ್ ಕುಂಬ್ಳೆ ವೃತ್ತ, ಚಾಲುಕ್ಯ ವೃತ್ತ ಹಾಗೂ ಸುತ್ತಮುತ್ತ ವಾಹನಗಳ ದಟ್ಟಣೆ ಉಂಟಾಯಿತು

 ಮಾರುಕಟ್ಟೆಯಲ್ಲೂ ನೀರು: ಚಿಕ್ಕಪೇಟೆ, ಕಾಟನ್‌ಪೇಟೆ, ಗಾಂಧಿನಗರ, ಮೆಜೆಸ್ಟಿಕ್, ಉಪ್ಪಾರಪೇಟೆ, ಓಕಳಿಪುರ, ಮಲ್ಲೇಶ್ವರ, ಯಶವಂತಪುರ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆ ಪ್ರದೇಶಗಳ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.

ಎಂ.ಜಿ. ರಸ್ತೆಯಲ್ಲಿ ಗುರುವಾರ ರಾತ್ರಿ ಮಳೆ ಸುರಿಯುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಕೊಡೆ ಹಿಡಿದು ಸಾಗಿದರು – ಪ್ರಜಾವಾಣಿ ಚಿತ್ರ

‘ನಗರದ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ತಿಳಿಸಿವೆ.

ಬೋಟ್‌ ಸೇವೆ
ವ್ಯಂಗ್ಯದ ಟ್ವೀಟ್ ನಗರದಲ್ಲಿ ಜೋರು ಮಳೆ ಸುರಿಯುತ್ತಿದ್ದಂತೆ ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ಕೆಲ ಸಾರ್ವಜನಿಕರು ‘ಬೆಂಗಳೂರಿನಲ್ಲಿ ಬೋಟ್ ಸೇವೆ ಆರಂಭವಾಗುವ ಲಕ್ಷಣ ಕಾಣಿಸುತ್ತಿದೆ. ಯಾವುದಕ್ಕೂ ಸಿದ್ಧ ಇರಿ’ ಎಂದಿದ್ದಾರೆ. ಉಬರ್ ಕಂಪನಿ ಆ್ಯಪ್‌ನ ಸ್ಕ್ರೀನ್‌ಶಾರ್ಟ್ ಮಾರ್ಪಾಡು ಮಾಡಿರುವ ಕೆಲವರು ಬೋಟ್‌ಗಳ ಚಿತ್ರ ಹಾಗೂ ಪ್ರಯಾಣ ದರ ನಮೂದು ಮಾಡಿದ್ದಾರೆ. ಈ ಚಿತ್ರವನ್ನು ಹಲವರು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.