ADVERTISEMENT

ಬೆಂಗಳೂರು | ರಸ್ತೆ ಅಪಘಾತ; ಮೇಲ್ಸೇತುವೆಯಿಂದ ಬಿದ್ದು ಮಹಿಳೆ ಸಾವು

ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಕಾರಿನ ಚಾಲಕ ಪರಾರಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 14:14 IST
Last Updated 24 ಆಗಸ್ಟ್ 2025, 14:14 IST
   

ಬೆಂಗಳೂರು: ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-44ರ ಬಚ್ಚಳ್ಳಿ ಗೇಟ್ ಮೇಲ್ಸೇತುವೆಯಲ್ಲಿ ಶನಿವಾರ ರಾತ್ರಿ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಬಾಣಸವಾಡಿ ನಿವಾಸಿ ನೇತ್ರಾವತಿ (31) ಅವರು ಪತಿ ಶಿವು ಜತೆ ದ್ವಿಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರದಲ್ಲಿನ ತವರು ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

‘ಕಾರು ಚಾಲಕ ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿಕೊಂಡು ಬಂದು ನೇತ್ರಾವತಿ ದಂಪತಿಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ನೇತ್ರಾವತಿ ಅವರು ದ್ವಿಚಕ್ರ ವಾಹನದಿಂದ ಮೇಲಕ್ಕೆ ಹಾರಿ ಸುಮಾರು 30 ಅಡಿ ಎತ್ತರದ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ದ್ವಿಚಕ್ರ ವಾಹನ ಸಮೇತ ಮೇಲ್ಸೇತುವೆಯಲ್ಲೇ ಬಿದ್ದ ಶಿವು ಅವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಕಾರು ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ಕಾರಿನ ದೃಶ್ಯ ಸೆರೆಯಾಗಿದ್ದು, ಈ ಸುಳಿವು ಆಧರಿಸಿ ಚಾಲಕನ ಪತ್ತೆ ಕಾರ್ಯ ಮುಂದುವರಿಸಿದ್ದೇವೆ’ ಎಂದು ಹೇಳಿದ್ದಾರೆ.

ನೇತ್ರಾವತಿ ಅವರು ಹೋಟೆಲ್‍ನಲ್ಲಿ ಸ್ವಾಗತಕಾರರಾಗಿದ್ದರು. ಶಿವು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದೇವನಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.