ADVERTISEMENT

ಪ್ರತ್ಯೇಕ ಅಪಘಾತ: ಚಿನ್ನಾಭರಣ ಅಂಗಡಿ ಮಾಲೀಕ, ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 13:49 IST
Last Updated 15 ಜನವರಿ 2026, 13:49 IST
<div class="paragraphs"><p>ಅಪಘಾತ</p></div>

ಅಪಘಾತ

   

ಬೆಂಗಳೂರು: ಹಲಸೂರು ಗೇಟ್ ಹಾಗೂ ವಿಜಯನಗರ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ಹಾಗೂ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಹಲಸೂರು ಗೇಟ್‌ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೃಪತುಂಗ ರಸ್ತೆಯಲ್ಲಿ ಖಾಸಗಿ ಬಸ್ ಹಾಗೂ ಸ್ಕೂಟರ್ ನಡುವೆ ಗುರುವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಚಿನ್ನಾಭರಣ ಅಂಗಡಿ ಮಾಲೀಕ, ನಗರ್ತಪೇಟೆಯ ನಿವಾಸಿ ಪಾರಸ್ಮಲ್‌ ಪಿ. ಜೈನ್‌ (70) ಮೃತಪಟ್ಟಿದ್ದಾರೆ.

ADVERTISEMENT

ಕೆಲಸದ ನಿಮಿತ್ತ ಪಾರಸ್ಮಲ್‌ ಅವರು ಗುರುವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ನೃಪತುಂಗ ರಸ್ತೆಯ ಬಸ್‌ ತಂಗುದಾಣದ ಬಳಿ ಅತೀ ವೇಗವಾಗಿ ಬಂದ ಖಾಸಗಿ ಬಸ್‌, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನಿಂದ ಬಿದ್ದ ಪಾರಸ್ಮಲ್‌ ಪಿ. ಜೈನ್‌ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿ ಇದ್ದವರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಹಲಸೂರು ಗೇಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬಾಲಕಿ ಸಾವು: ವಿಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಹಳ್ಳಿ ಡೌನ್‌ ರ್‍ಯಾಂಪ್‌ ಬಳಿ ದ್ವಿಚಕ್ರ ವಾಹನದಿಂದ ಬಿದ್ದು ಬಾಲಕಿ ಹಾರಿಕಾ (6) ಮೃತಪಟ್ಟಿದ್ದಾಳೆ. ಮೃತ ಬಾಲಕಿ ನಂದಿನಿ ಲೇಔಟ್‌ ನಿವಾಸಿ ಪರಮೇಶ್ವರ್‌ ಅವರ ಪುತ್ರಿ.

ಹಾರಿಕಾ ತಂದೆಯ ಜತೆಗೆ ಬುಧವಾರ ಸಂಜೆ ಬೈಕ್‌ನಲ್ಲಿ ತೆರಳುತ್ತಿದ್ದಳು. ಶಿವನಹಳ್ಳಿ ಡೌನ್‌ ರ್‍ಯಾಂಪ್‌ ಬಳಿ ಬ್ರೇಕ್‌ ಹಾಕಿದಾಗ ನಿಯಂತ್ರಣ ತಪ್ಪಿ ಬಾಲಕಿ ಕೆಳಕ್ಕೆ ಬಿದ್ದಿದ್ದಳು. ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದಳು. ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾಳೆ ಎಂದು ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.