
ಮಹೇಶ್ವರ್ ರಾವ್ ಅವರು ಮೆಜೆಸ್ಟಿಕ್‌ನಲ್ಲಿ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಿದರು
ಬೆಂಗಳೂರು: ನಗರದಲ್ಲಿ ಸುಮಾರು 18 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಜಂಕ್ಷನ್‌ಗಳ ಅಭಿವೃದ್ಧಿಗೆ ₹100 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
₹1,700 ಕೋಟಿ ವೆಚ್ಚದಲ್ಲಿ 220.68 ಕಿಮೀ ಉದ್ದದ 140 ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, 79.08 ಕಿ.ಮೀ (39 ರಸ್ತೆ) ವೈಟ್ ಟಾಪಿಂಗ್ ಕೆಲಸ ಪೂರ್ಣಗೊಂಡಿದೆ. ಉಳಿದ 101 ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ₹694 ಕೋಟಿ ವೆಚ್ಚದಲ್ಲಿ 386.5 ಕಿಮೀ ರಸ್ತೆಗಳ ಡಾಂಬರೀಕರಣ ನಡೆಯುತ್ತಿದ್ದು, ಶೇ 44ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸವನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
₹100 ಕೋಟಿ ವೆಚ್ಚದಲ್ಲಿ ‘ಸುರಕ್ಷಾ 75’ ಜಂಕ್ಷನ್ ಸುಧಾರಣಾ ಯೋಜನೆಯ ಶೇ 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈಜೀಪುರ ಮೇಲ್ಸೇತುವೆ ಕಾಮಗಾರಿ 2026ರ ಜುಲೈ ಅಂತ್ಯಕ್ಕೆ ಮುಗಿಯಲಿದೆ ಎಂದರು.
ಐದು ನಗರ ಪಾಲಿಕೆಗಳ ಕರಡು ವಾರ್ಡ್ ಪುನರ್ ವಿಂಗಡಣೆ ಅಧಿಸೂಚನೆಯನ್ನು ಸೆ.30ರಂದು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳ ಅವಧಿ ಮುಗಿದಿದೆ. ಪರಿಶೀಲನೆಯ ನಂತರ ಅಂತಿಮ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಹೇಳಿದರು.
ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ₹6,700 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇದ್ದು, ಇದುವರೆಗೆ ₹3,437 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಉಳಿದ ಮೊತ್ತವನ್ನು, ಆಯಾ ನಗರ ಪಾಲಿಕೆಗಳಲ್ಲಿ ಸಂಗ್ರಹ ಮಾಡಲು ಸೂಕ್ತ ಕ್ರಮವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿರುವ ಸುಮಾರು 25 ಲಕ್ಷ ಆಸ್ತಿಗಳ ಪೈಕಿ 7,96,780 ಅರ್ಜಿಗಳು ಸ್ವೀಕರಿಸಲಾಗಿದ್ದು, ಇದರಲ್ಲಿ 7,83,179ಕ್ಕೆ ಅಂತಿಮ ಇ-ಖಾತಾ ನೀಡಲಾಗಿದೆ. ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತನೆಗಾಗಿ 1,169 ನಾಗರಿಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.