
ಸಾಂದರ್ಭಿಕ ಚಿತ್ರ
ಕೃಪೆ: ಎಐ
ಬೆಂಗಳೂರು: ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿವೇಕನಗರದ ಮುಖ್ಯರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಶಾಲಾ ಬಸ್ ಡಿಕ್ಕಿಯಾಗಿ ತಾಯಿ ಹಾಗೂ ಮಗ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಸಂಗೀತಾ (37) ಹಾಗೂ ಅವರ ಮಗ ಪಾರ್ಥ (8) ಮೃತಪಟ್ಟವರು.
ವಿವೇಕನಗರದಲ್ಲಿ ವಾಸವಾಗಿದ್ದ ಸಂಗೀತಾ, ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಶಾಲೆಗೆ ಹೊರಟಿದ್ದ ಸಂಗೀತಾ ಮತ್ತು ಪಾರ್ಥ ರಸ್ತೆ ದಾಟುತ್ತಿದ್ದರು. ಆಗ ವೇಗವಾಗಿ ಬಂದ ಕಾಲೇಜು ಬಸ್ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದ ಅವರ ಮೇಲೆಯೇ ಬಸ್‌ನ ಚಕ್ರಗಳು ಹರಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದರು. ತಾಯಿ ಮತ್ತು ಮಗನನ್ನು ಸ್ಥಳೀಯರು ಹಾಗೂ ಸಂಚಾರ ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.
ಸಂಗೀತಾ ಅವರ ಪತಿ ಪ್ರಸಾದ್, ಆಂಧ್ರಪ್ರದೇಶದಲ್ಲಿ ನೆಲಸಿದ್ದಾರೆ. ಕೃಷಿಕರಾದ ಅವರು ಆಗಾಗ್ಗೆ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಸಂಗೀತಾ ದಂಪತಿಗೆ ಇಬ್ಬರು ಮಕ್ಕಳು ಎಂದು ಪೊಲೀಸರು ಹೇಳಿದರು.
ಘಟನೆ ನಡೆದ ಬಳಿಕ ಬಸ್ ಅನ್ನು ಚಾಲಕ ಸ್ಥಳದಲ್ಲೇ ಬಿಟ್ಟು ಪರಾರಿ ಆಗಿದ್ದ. ಚಾಲಕನನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಬಸ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಬಸ್ ಚಾಲಕನ ಅಜಾಗರೂಕತೆ ಹಾಗೂ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಸಂಚಾರ ಪೊಲೀಸರು ಹೇಳಿದರು. ಅಶೋಕನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.