ADVERTISEMENT

₹500 ಕೋಟಿಯಷ್ಟೇ ಕೇಂದ್ರ ಅನುದಾನ!

ಬೆಂಗಳೂರು ಉಪನಗರ ರೈಲು ಯೋಜನೆ: ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ ರೈಲ್ವೆ ಸಚಿವಾಲಯ

ಪ್ರವೀಣ ಕುಮಾರ್ ಪಿ.ವಿ.
Published 27 ಅಕ್ಟೋಬರ್ 2020, 1:34 IST
Last Updated 27 ಅಕ್ಟೋಬರ್ 2020, 1:34 IST
ಉಪನಗರ ರೈಲು (ಸಾಂದರ್ಭಿಕ ಚಿತ್ರ)
ಉಪನಗರ ರೈಲು (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಉಪನಗರ ರೈಲು ಯೋಜನೆಗೆ ಕೇಂದ್ರ ₹ 2,479 ಕೋಟಿ ಭರಿಸಲಿದೆ. ಆದರೆ, ಕೇಂದ್ರ ರೈಲ್ವೆ ಸಚಿವಾಲಯವು ಬಜೆಟ್‌ ಅನುದಾನದ ರೂಪದಲ್ಲಿ ನೀಡುವುದು ₹ 500 ಕೋಟಿ ಮಾತ್ರ. ಉಳಿದ ಮೊತ್ತವನ್ನು ರೈಲ್ವೆ ಜಾಗದ ನಗದೀಕರಣದಿಂದ ಹೊಂದಿಸಬೇಕಿದೆ.

ಉಪನಗರ ರೈಲು ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ತೀರ್ಮಾನಗಳ ಕುರಿತು ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ (ಕೆ–ರೈಡ್‌) ಆಡಳಿತ ನಿರ್ದೇಶಕರಿಗೆ ರೈಲ್ವೆ ಮಂಡಳಿಯ ಮಹಾನಗರ ಸಾರಿಗೆ ಯೋಜನೆಯ ನಿರ್ದೇಶಕ ಡಿ.ಕೆ.ಮಿಶ್ರಾ ಬರೆದಿರುವ ಅಧಿಕೃತ ಜ್ಞಾಪನಾಪತ್ರದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

ರೈಲ್ವೆ ಇಲಾಖೆಯು ಈ ಕಾಮ ಗಾರಿಯ ವಿಸ್ತೃತ ಯೋಜನಾ ವರದಿ ಯಲ್ಲಿ (ಡಿಪಿಆರ್‌) ಗುರುತಿಸಿದ ರೈಲ್ವೆ ಇಲಾಖೆ ಜಾಗದಲ್ಲಿ ಮೌಲ್ಯಸಂಗ್ರಹಿತ ಹೂಡಿಕೆ (ವಿಸಿಎಫ್‌) ಚೌಕಟ್ಟಿನ ರೂಪದಲ್ಲಿ ಒಟ್ಟಾಗುವ ಮೊತ್ತದ ಒಂದು ಭಾಗವನ್ನು ಈ ಯೋಜನೆಗೆ ಬಳಸಲಿದೆ. ರೈಲ್ವೆ ಇಲಾಖೆಗೆ ಸೇರಿದ ಖಾಲಿ ಜಾಗದ ನಗದೀಕರಣದ ಮೂಲಕ ₹ 4,815 ಕೋಟಿ ರೂಪಾಯಿ ಸಂಗ್ರಹಿಸಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ಉಪನಗರ ರೈಲು ಯೋಜನೆಯ ಕಾರಿಡಾರ್‌ಗಳ ಆಸುಪಾಸಿನಲ್ಲಿರುವ ರೈಲ್ವೆ ಜಾಗದಲ್ಲಿ ಬಹುಮಹಡಿ ಕಟ್ಟಡಗಳಿಗೆ ಅನುಮತಿ ನೀಡುವಾಗ 5ರವರೆಗೆ ಫ್ಲೋರ್‌ ಏರಿಯಾ ರೇಷಿಯೊ (ಎಫ್‌ಎಆರ್‌) ಬಳಕೆಗೆ ಅವಕಾಶ ಕಲ್ಪಿಸುವ ಮೂಲಕ ಇಲ್ಲಿ ಹೂಡಿಕೆಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಒಪ್ಪಿದೆ. ರೈಲ್ವೆ ಜಾಗದಲ್ಲಿ ಹೂಡಿಕೆಗೆ ಉತ್ತೇಜನ ಕಲ್ಪಿಸಲು ರೈಲ್ವೆ ಸಚಿವಾಲಯ ಕೈಗೊಳ್ಳುವ ಕ್ರಮಗಳ ಜಾರಿಗೆ ಅನುಕೂಲ ಕಲ್ಪಿಸಲು ಉನ್ನತಾಧಿಕಾರ ಸಮಿತಿಯನ್ನೂ ರಾಜ್ಯ ಸರ್ಕಾರವು ರಚಿಸಬೇಕಿದೆ.

ರೈಲ್ವೆ ಇಲಾಖೆಗೆ ಸೇರಿರದ ಜಾಗದಿಂದ ₹ 2,573 ಕೋಟಿ ಮೌಲ್ಯ ಸಂಗ್ರಹಿತ ಹೂಡಿಕೆ ಮೂಲಕ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನು ಪ್ರೀಮಿಯಂ ಎಫ್‌ಆರ್‌ ಮಾರಾಟ, ಹೊಸ ಬಡಾವಣೆಗಳಿಗೆ ಸುಧಾರಣಾ ಶುಲ್ಕ, ಭೂಬಳಕೆ ಶುಲ್ಕ, ಸುಂಕ (ಸೆಸ್‌) ವಿಧಿಸುವ ಮೂಲಕ ಸಂಗ್ರಹಿಸಬೇಕು. ಇವೆಲ್ಲವನ್ನೂ ಪ್ರಯಾಣದ ಟಿಕೆಟ್‌ ಹೊರತಾಗಿ ಸಂಗ್ರಹವಾಗುವ ದರದ ರೂಪದಲ್ಲಿ ಪರಿಗಣಿಸಬೇಕು ಎಂದು ಕೆ–ರೈಡ್‌ಗೆ ರೈಲ್ವೆ ಸಚಿವಾಲಯವು ವಿಧಿಸಿರುವ ಷರತ್ತಿನಲ್ಲಿ ಸೂಚಿಸಿದೆ. ಆದರೆ, ಈ ಮೊತ್ತದ ಸಂಗ್ರಹಕ್ಕೆ ರೈಲ್ವೆ ಇಲಾಖೆ ಹೊರತಾಗಿ ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ನಗರಾಭಿವೃದ್ಧಿ ಇಲಾಖೆಗಳ ಸಹಕಾರವೂ ಅಗತ್ಯ. ಹಾಗಾಗಿ ಇದು ಎಷ್ಟು ಕಾರ್ಯಸಾಧು ಎಂಬ ಪ್ರಶ್ನೆ ಉದ್ಭವಿಸಿದೆ.

ಈ ಯೋಜನೆಗೆ ಬಳಕೆಯಾಗುವ ರೈಲ್ವೆ ಜಾಗ ಹಾಗೂ ರಾಜ್ಯ ಸರ್ಕಾರದ ಜಾಗಗಳು ಬಳಕೆ ಆಗಲಿವೆ. ಎಕರೆಗೆ ₹ 1ರಂತೆ ಬಾಡಿಗೆ ವಿಧಿಸುವ ಮೂಲಕ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರಗಳುಈ ಜಾಗಗಳನ್ನು ಒದಗಿಸಲಿವೆ.

ರೈಲ್ವೆ ಸಚಿವಾಲಯ ಹಾಗೂ ರಾಜ್ಯ ಸರ್ಕಾರ ತಮ್ಮ ಪಾಲನ್ನು ಕೆ–ರೈಡ್‌ಗೆ ಪಾವತಿ ಮಾಡಬೇಕು. ಯೋಜನೆ ಕುರಿತಂತೆ ಒಪ್ಪಂದಗಳನ್ನು ಮಾಡಿಕೊಳ್ಳುವುದು ಹಾಗೂ ಅವುಗಳ ಜಾರಿಗೊಳಿಸಲು ಕೆ–ರೈಡ್‌ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಸಚಿವಾಲಯ ಸೂಚಿಸಿದೆ. ಆದರೆ ಬೋಗಿಗಳ ಖರೀದಿಗೆ ಯಾವುದೇ ಹಣಕಾಸು ಒದಗಿಸಿಲ್ಲ. ಬೋಗಿಗಳ ಖರೀದಿ, ನಿರ್ಹವಣೆ ಹಾಗೂ ರೈಲು ಸಿಬ್ಬಂದಿ ನಿರ್ವಹಣೆಗೆ ಖಾಸಗಿ ಸಹಭಾಗಿತ್ವದ ಮೊರೆ ಹೋಗುವಂತೆ ಸಲಹೆ ನೀಡಲಾಗಿದೆ.

‘ಯೋಜನೆಗೆ ಬೇಕಾಗುವ ಜಾಗವನ್ನು ಎಕರೆಗೆ ₹ 1 ರಂತೆ ಒದಗಿಸಲು ರೈಲ್ವೆ ಸಚಿವಾಲಯ ಹಾಗೂ ರಾಜ್ಯ ಸರ್ಕಾರಗಳು ಒಪ್ಪಿರು ವುದು ಒಳ್ಳೆಯ ಅಂಶ. ಆದರೆ, ರೈಲ್ವೆಯೇತರ ಜಾಗದಿಂದ ಹಣಕಾಸು ಹೊಂದಿಸುವುದು ನಿಜಕ್ಕೂ ಸವಾಲಿನ ವಿಷಯ. ವಿಸಿಎಫ್‌ ಮೂಲಕರೈಲ್ವೆ ಸಚಿವಾಲಯದ ಹೂಡಿಕೆ ಪಾಲನ್ನು ಸಂಗ್ರಹಿಸುವುದು ಸವಾಲಿನಿಂದ ಕೂಡಿರಲಿದೆ. ಇದಕ್ಕೆ ಕೆ–ರೈಡ್‌ ಹಾಗೂ ನೈರುತ್ಯ ರೈಲ್ವೆ ನಡುವೆ ಇನ್ನೊಂದು ಸುತ್ತಿನ ಒಪ್ಪಂದ ನಡೆಯಬೇಕಿದೆ’ ಎಂದು ವಿಶ್ಲೇಷಿಸುತ್ತಾರೆ ಪ್ರಜಾರಾಗ್‌ನ ಸಂಜೀವ ದ್ಯಾಮಣ್ಣವರ್‌.

ಪ್ರಯಾಣ ದರ ನಿಗದಿ ಅಧಿಕಾರ ಕೆ–ರೈಡ್‌ಗೆ

ಉಪನಗರ ರೈಲು ಯೋಜನೆ ಕಾರ್ಯಗತಗೊಂಡ ಬಳಿಕ ಪ್ರಯಾಣಕ್ಕೆ ದರ ನಿಗದಿ ಪಡಿಸುವ ಅಧಿಕಾರ ಕೆ–ರೈಡ್‌ನದು. ಆದರೆ, ಪ್ರಯಾಣ ದರವು ನಮ್ಮ ಮೆಟ್ರೊ ದರಕ್ಕಿಂತ ಹೆಚ್ಚು ಇರುವಂತಿಲ್ಲ. ಹಾಗಾಗಿ ಉಪನಗರ ರೈಲುಗಳ ಲಾಭ ಅಥವಾ ನಷ್ಟಕ್ಕೆ ಕೆ–ರೈಡ್‌ ಹೊಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.