ADVERTISEMENT

‘ಪೂರ್ಣಪ್ರಮಾಣದ ಕೌಶಲ ಸಮಾವೇಶ ಶೀಘ್ರ’

ಕೌಶಲ ಅಭಿವೃದ್ಧಿ ಸಚಿವ ಎಚ್.ನಾಗೇಶ್‌ ಹೇಳಿಕೆ l ಐಟಿಐಗಳ ಬಲವರ್ಧನೆಗೆ ಕ್ರಮ: ಭರವಸೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 5:34 IST
Last Updated 20 ನವೆಂಬರ್ 2019, 5:34 IST
ರಷ್ಯಾದಲ್ಲಿ ನಡೆದ ವಿಶ್ವ ಕೌಶಲ ಸ್ಪರ್ಧೆಯಲ್ಲಿ ವಿಜೇತರಾದ ಸಿ. ಸುಮಂತ್, ಪ್ರಣವ್‌ ಹಾಗೂ ಮಂಜುನಾಥ್ ಅವರನ್ನು ಸಚಿವ ಎಚ್‌. ನಾಗೇಶ್‌ ಮಂಗಳವಾರ ಸನ್ಮಾನಿಸಿದರು. ಎಸ್‌.ಸಡಗೋಪನ್‌, ಸೆಲ್ವಕುಮಾರ್ ಹಾಗೂ ಕೆ.ಪಿ. ಮೋಹನ್‌ರಾಜ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ರಷ್ಯಾದಲ್ಲಿ ನಡೆದ ವಿಶ್ವ ಕೌಶಲ ಸ್ಪರ್ಧೆಯಲ್ಲಿ ವಿಜೇತರಾದ ಸಿ. ಸುಮಂತ್, ಪ್ರಣವ್‌ ಹಾಗೂ ಮಂಜುನಾಥ್ ಅವರನ್ನು ಸಚಿವ ಎಚ್‌. ನಾಗೇಶ್‌ ಮಂಗಳವಾರ ಸನ್ಮಾನಿಸಿದರು. ಎಸ್‌.ಸಡಗೋಪನ್‌, ಸೆಲ್ವಕುಮಾರ್ ಹಾಗೂ ಕೆ.ಪಿ. ಮೋಹನ್‌ರಾಜ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ತಂತ್ರಜ್ಞಾನ ಶೃಂಗಸಭೆಯ ಭಾಗವಾಗಿ ಈ ಬಾರಿ ಕೌಶಲ ಸಮಾವೇಶ ಆಯೋಜಿಸಲಾಗಿದೆ. ಮುಂದಿನ ವರ್ಷದಿಂದ ಪೂರ್ಣಪ್ರಮಾಣದ ಕೌಶಲ ಸಮಾವೇಶ ಆಯೋಜಿಸುವ ಉದ್ದೇಶವಿದೆ’ ಎಂದು ಕೌಶಲ ಅಭಿವೃದ್ಧಿ ಸಚಿವ ಎಚ್.ನಾಗೇಶ್‌ ಹೇಳಿದರು.

ಬೆಂಗಳೂರು ಅರಮನೆ ಆವರಣದಲ್ಲಿ ಮಂಗಳವಾರ ನಡೆದ ಕೌಶಲ ಸಮಾವೇಶದಲ್ಲಿ ಮಾತನಾಡಿದ ಅವರು, ತಜ್ಞರ ಸಲಹೆಯ ನಂತರ ಈ ಭರವಸೆ ನೀಡಿದರು.

‘ಕೃತಕ ಬುದ್ಧಿಮತ್ತೆ, ಮೆಷಿನ್‌ ಲರ್ನಿಂಗ್, ಆಟೊಮೇಷನ್‌ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆಯಾಗುತ್ತಿರುವ ಈ ಸಂದರ್ಭದಲ್ಲಿ ಕೆಲಸ ಮತ್ತು ಕೆಲಸದ ಸ್ಥಳದ ಸ್ವರೂಪವೂ ಬದಲಾಗುತ್ತಿದೆ. ಇದಕ್ಕೆ ಯುವಸಮೂಹವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕೌಶಲ ಅಗತ್ಯ. ಈ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೌಶಲ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿವೆ’ ಎಂದು ತಿಳಿಸಿದರು.

ADVERTISEMENT

‘ಕೌಶಲ್ಕರ್‌ ಎನ್ನುವ ವೆಬ್‌ ಪೋರ್ಟಲ್‌ ರೂಪಿಸಲಾಗಿದ್ದು, ನಿರುದ್ಯೋಗಿಗಳು ಮತ್ತು ಕೌಶಲದ ಅಗತ್ಯವಿರುವ ಅಭ್ಯರ್ಥಿಗಳಿಗೆ ಈ ಮೂಲಕ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಡಿ 76 ಐಟಿಐಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಈ ಐಟಿಐಗಳಲ್ಲಿ ಹೊಸ ಯಂತ್ರಗಳು, ಉಪಕರಣಗಳನ್ನು ಅಳವಡಿಸಲಾಗಿದ್ದು ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ’ ಎಂದರು.

‘ಕೌಶಲ ಅಭಿವೃದ್ಧಿ ಇಲಾಖೆ ಸ್ಥಾಪಿಸಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕೌಶಲ ಮಿಷನ್‌ನಿಂದ ವಿವಿಧ ಏಜೆನ್ಸಿಗಳ ಮೂಲಕ ಕೌಶಲ ತರಬೇತಿ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ (ಸಿಎಂಕೆಕೆವೈ) ಮೂಲಕ ಪ್ರತಿ ವರ್ಷ 2.5 ಲಕ್ಷ ಯುವಕ–ಯುವತಿಯರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಉದ್ಯೋಗ ಸೃಷ್ಟಿ ಹಾಗೂ ಕೌಶಲ ತರಬೇತಿ ಉದ್ದೇಶದಿಂದ ರಾಜ್ಯಸರ್ಕಾರವು ಶೀಘ್ರದಲ್ಲಿಯೇ ‘ಸ್ಕಿಲ್‌ಟ್ಯೂಬ್‌’ ಹೆಸರಿನಡಿ ವೆಬ್‌ ವೇದಿಕೆಗೆ ಚಾಲನೆ ನೀಡಲಿದೆ. ರೋಬೊಟಿಕ್ಸ್‌, ಕೃತಕ ಬುದ್ಧಿಮತ್ತೆಯಂತಹ ಕ್ಷೇತ್ರದಲ್ಲಿಯೂ ತರಬೇತಿ ನೀಡಲಾಗುವುದು’ ಎಂದುಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಎಸ್. ಸಡಗೋಪನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.