ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಪೊಲೀಸ್ ಪರಿಶೀಲನೆಗೆ ಅಗತ್ಯವಿರುವ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿಕೊಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿಯ ವಿಶೇಷ ವಿಚಾರಣಾ ದಳದ ಪೊಲೀಸರು ಬಂಧಿಸಿದ್ದಾರೆ.
ದೀಪಕ್, ಉದಯ್ ಕುಮಾರ್ ಹಾಗೂ ರಾಮಕೃಷ್ಣ ಬಂಧಿತರು. ಆರೋಪಿಗಳಿಂದ ಕಂಪ್ಯೂಟರ್ ಹಾಗೂ ನಕಲಿ ದಾಖಲಾತಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಮೂವರು ಆರೋಪಿಗಳು ಬೆಂಗಳೂರಿನವರೇ ಆಗಿದ್ದು, ಭದ್ರತಾ ಏಜೆನ್ಸಿ ನಡೆಸುತ್ತಿದ್ದರು. ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಹಲವರಿಗೆ ನಕಲಿ ದಾಖಲೆಗಳನ್ನು ತಯಾರಿಸಿ ಕೊಟ್ಟಿರುವುದು ಪತ್ತೆಯಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪೊಲೀಸ್ ಠಾಣೆಗೆ ಸಲ್ಲಿಸಿದ್ದು, ಗಮನಕ್ಕೆ ಬಂದಿತ್ತು. ಅದನ್ನು ಆಧರಿಸಿ, ಸಿಸಿಬಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
‘ವಿವಿಧ ಕಾರಣಗಳಿಗಾಗಿ ಅಗತ್ಯವಿರುವ ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ಪಡೆಯಲು ಸೇವಾಸಿಂಧು ಪೋರ್ಟಲ್‌ನ ಮೂಲಕ ಅರ್ಜಿ ಸಲ್ಲಿಸಲಾಗುತ್ತದೆ. ಇತ್ತೀಚೆಗೆ ಕರ್ನಾಟಕ ಮಾತ್ರವಲ್ಲದೆ ಅನ್ಯ ರಾಜ್ಯದ ಕೆಲವರು ಬೆಂಗಳೂರಿನಲ್ಲಿ ವಾಸವಾಗಿರುವುದಾಗಿ ನಕಲಿ ಬಾಡಿಗೆ ಒಪ್ಪಂದ ಪತ್ರ ಸಲ್ಲಿಸಿರುವುದು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಸಿಸಿಬಿಯ ಹೆಚ್ಚುವರಿ ಪೊಲೀಸ್ ಕಮಿಷನರ್ ಚಂದ್ರಗುಪ್ತ ತಿಳಿಸಿದರು.
‘ಬೇರೆ ಬೇರೆ ಕಾರಣಕ್ಕೆ ಪೊಲೀಸ್ ಪರಿಶೀಲನೆ ನಡೆಸಲಾಗುತ್ತದೆ. ಪೊಲೀಸ್ ದಾಖಲೆಗಳಲ್ಲಿ ವ್ಯಕ್ತಿಯ ಹಿನ್ನೆಲೆ ಪರಿಶೀಲನೆ ನಡೆಸಲಾಗುತ್ತದೆ. ಕೆಲವೊಮ್ಮೆ ಅವರು ವಾಸವಾಗಿರುವ ಸ್ಥಳಕ್ಕೆ ಹೋಗಿ ಅವರ ಇರುವಿಕೆಯ ಬಗ್ಗೆ, ಇತರೆ ರೀತಿಯ ಚಟುವಟಿಕೆ ಪರಿಶೀಲನೆ ನಡೆಸಲಾಗುತ್ತದೆ. ಈ ಪರಿಶೀಲನಾ ಕಾರ್ಯಕ್ಕೆ ಬೇಕಾಗುವ ದಾಖಲೆಗಳನ್ನು ಆರೋಪಿಗಳು ನಕಲಿಯಾಗಿ ತಯಾರಿಸಿಕೊಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.