ADVERTISEMENT

ಬೆಂಗಳೂರು ವಿ.ವಿ.: ವಿದ್ಯಾರ್ಥಿಗಳ ಪ್ರತಿಭಟನೆ

ಯುವಿಸಿಇಗೆ ಹಣ ವರ್ಗಾವಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಮೇ 2022, 19:58 IST
Last Updated 27 ಮೇ 2022, 19:58 IST

ಬೆಂಗಳೂರು: ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ಸಿಂಡಿಕೇಟ್‌ ಸದಸ್ಯರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿಶ್ವವಿದ್ಯಾಲಯದ ಅಭಿವೃದ್ಧಿ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದ ಹಣವನ್ನು ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯದ (ಯುವಿಸಿಇ) ಮೆಕ್ಯಾನಿಕಲ್‌ ವಿಭಾಗದ ಕಟ್ಟಡ ನಿರ್ಮಾಣಕ್ಕೆ ವರ್ಗಾಯಿಸಲು ನಿರ್ಧಾರ ಕೈಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈ ಪ್ರತಿಭಟನೆ ನಡೆಸಲಾಯಿತು. ಹಣಕಾಸು ಅಧಿಕಾರಿಗಳ ಕಚೇರಿಗೆ ನುಗ್ಗಿದ ಪ್ರತಿಭಟನಕಾರರು ಕೊಠಡಿಗೆ ಬೀಗ ಹಾಕಿದರು.

‘ಅಧಿಕಾರ ದುರುಪಯೋಗ ಮಾಡಿಕೊಂಡು ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ಇತರ ಶೀರ್ಷಿಕೆಗಳ ಅಡಿಯಲ್ಲಿ ಮೀಸಲಿಡಲಾಗಿದ್ದ ಹಣವನ್ನು ಯುವಿಸಿಇಗೆ ನೀಡಲಾಗುತ್ತಿದೆ. ಸಿಂಡಿಕೇಟ್‌ ಮತ್ತು ಹಣಕಾಸು ಸಮಿತಿ ಅನುಮೋದನೆ ಇಲ್ಲದೆಯೇ ಈ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಸುಧಾಕರ್‌ ತಿಳಿಸಿದರು.

ADVERTISEMENT

ಯುವಿಸಿಇ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಹಣ ವರ್ಗಾವಣೆ ಮಾಡಬಾರದು. ಹಣ ವರ್ಗಾವಣೆ ಮಾಡಿದರೆ ಪಿಂಚಣಿ ಮತ್ತು ಇತರ ಯೋಜನೆಗಳಿಗೆ ಕೊರತೆಯಾಗಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ (ಬಿಯುಟಿಸಿ) ಸದಸ್ಯರು ಕುಲಪತಿ ಅವರಿಗೆ ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.