ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಹಸಿರು ಪರಿಸರವನ್ನು ಕಾಪಾಡುವ ಉದ್ದೇಶದಿಂದ ಜೀವ ವೈವಿಧ್ಯ ಕಾಯ್ದೆ 2002 ರ ಅಡಿ ‘ಪಾರಂಪರಿಕ ತಾಣ’ ಎಂದು ಘೋಷಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಜ್ಞಾನಭಾರತಿ ಅವರಣದಲ್ಲಿ ಲಕ್ಷಾಂತರ ಬೃಹತ್ ಮರಗಳಿದ್ದು, ಇಲ್ಲಿನ ಜೀವವೈವಿಧ್ಯತೆಯನ್ನು ಮುಂದಿನ ಪೀಳಿಗೆಗೆ ಕಾಪಾಡುವ ಮತ್ತು ಬೆಂಗಳೂರು ಮಹಾನಗರದ ಹಸಿರು ವಲಯ ರಕ್ಷಿಸುವ ಹೊಣೆ ಇಲಾಖೆ ಮೇಲಿದೆ ಎಂದು ಹೇಳಿದ್ದಾರೆ.
ಆದರೆ, ಜ್ಞಾನಭಾರತಿ ಪ್ರದೇಶದಲ್ಲಿ ಮರಗಳನ್ನು ಕಡಿದು ವಿವಿಧ ನಿರ್ಮಾಣ ಕಾರ್ಯಕೈಗೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದು, ಇದನ್ನು ತಡೆದು ಜೀವ ವೈವಿಧ್ಯ ರಕ್ಷಿಸುವಂತೆ ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜ್ಞಾನಭಾರತಿ ವಾಯುವಿಹಾರಿಗಳ ಸಂಘ ಸಲ್ಲಿಸಿದ್ದ ದೂರಿನ ಮೇರೆಗೆ, ವೈಜ್ಞಾನಿಕ ವರದಿ ಸಲ್ಲಿಸಲು ರಾಜ್ಯಪಾಲರು ಸೂಚಿಸಿದ್ದರು. ಅದರಂತೆ ಮೌಲ್ಯಮಾಪನ ಕುಲಸಚಿವರ ಅಧ್ಯಕ್ಷತೆಯಲ್ಲಿ 2024ರ ಸೆಪ್ಟೆಂಬರ್ 26ರಂದು ಸಮಿತಿ ರಚಿಸಲಾಗಿತ್ತು. ಜ್ಞಾನಭಾರತಿ ಆವರಣವನ್ನು ಜೀವವೈವಿಧ್ಯ ಕಾಯ್ದೆ– 2002ರಂತೆ ‘ಪಾರಂಪರಿಕ ತಾಣ’ ಎಂದು ಘೋಷಿಸಬೇಕು’ ಎಂದು ಸಮಿತಿ ವರದಿ ನೀಡಿತ್ತು. ಅದನ್ನು ರಾಜ್ಯಪಾಲರಿಗೆ ತಲುಪಿಸಿರಲಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯ ಮೇ 10ರ ಸಂಚಿಕೆಯಲ್ಲಿ ‘ಪಾರಂಪರಿಕ ತಾಣ’ ಆಗಲಿ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.