ADVERTISEMENT

ಬೆಂಗಳೂರು ವಿವಿ: ಆನ್‌ಲೈನ್ ಪ್ರವೇಶ ಪ್ರಕ್ರಿಯೆ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 19:28 IST
Last Updated 16 ಜನವರಿ 2021, 19:28 IST

ಬೆಂಗಳೂರು: 2020-21ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಬೆಂಗಳೂರು ವಿಶ್ವವಿದ್ಯಾಲಯವು ಆನ್-ಲೈನ್ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಿದೆ.

ಸ್ನಾತಕೋತ್ತರ ಕೋರ್ಸಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸುವುದರಿಂದ ಪ್ರಾರಂಭಗೊಂಡು ಸೀಟುಗಳ ಹಂಚಿಕೆ, ಶುಲ್ಕಪಾವತಿ ಮತ್ತು ಇತರೆ ಎಲ್ಲ ಪ್ರಕ್ರಿಯೆ ಆನ್‌ಲೈನ್‌ನಲ್ಲಿಯೇ ನಡೆಯಲಿವೆ.

ವಿಶ್ವವಿದ್ಯಾಲಯಕ್ಕೆ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಬಯಸಿ ಒಟ್ಟು 15,539 ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ಸಾಲಿಗೆ ಹೋಲಿಸಿದರೆ, ಶೇ 20ರಷ್ಟು ಹೆಚ್ಚು ಅರ್ಜಿಗಳು ಈ ಬಾರಿ ಸ್ವೀಕೃತಗೊಂಡಿವೆ. ವಿಶ್ವವಿದ್ಯಾಲಯದಲ್ಲಿ ಒಟ್ಟು 58 ಸ್ನಾತಕೋತ್ತರ ವಿಭಾಗಗಳು ಮತ್ತು 14 ಸ್ನಾತಕೋತ್ತರ ಸರ್ಟಿಫಿಕೇಟ್ / ಡಿಪ್ಲೊಮಾ ಕೋರ್ಸುಗಳು ಇವೆ.

ADVERTISEMENT

ಅಂತಿಮ ಮೆರಿಟ್ ಪಟ್ಟಿಯನ್ನು ವಿಶ್ವವಿದ್ಯಾಲಯದ ವೆಬ್ ಸೈಟ್ https://bangaloreuniversity.ac.in/ನಲ್ಲಿ ಪ್ರಕಟಿಸಲಾಗಿದೆ.

ಇದೇ 18ರಂದು ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದ್ದು, ಇದೇ 20ರೊಳಗೆ ಶುಲ್ಕ ಪಾವತಿ ಮಾಡಬೇಕು. ಇದೇ 22ರಂದು ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದ್ದು, ಇದೇ 25ರೊಳಗೆ ಅಭ್ಯರ್ಥಿಗಳು ಶುಲ್ಕ ಕಟ್ಟಬೇಕು. ಇದೇ 27ರಂದು ಮೂರನೇ ಸುತ್ತಿನ ಪ್ರಕ್ರಿಯೆ ನಡೆಯಲಿದ್ದು, ಈ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಇದೇ 29ರೊಳಗೆ ಶುಲ್ಕ ಪಾವತಿಸಬೇಕು. ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಫೆ.1ರಂದು ಮಧ್ಯಾಹ್ನ 12ರವರೆಗೆ ನಡೆಯಲಿದ್ದು, ಇದೇ 3ರಂದು ಶುಲ್ಕ ಪಾವತಿಸಲು ಕೊನೆಯ ದಿನ ಎಂದು ವಿಶ್ವವಿದ್ಯಾಲಯ ಹೇಳಿದೆ.

ಆಫ್‌ಲೈನ್‌ ಬೇಕು:

‘ಸ್ನಾತಕೋತ್ತರ ಪದವಿ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದವರಾಗಿರುತ್ತಾರೆ. ಅಂತರ್ಜಾಲ ಸೌಲಭ್ಯ ಬಹುತೇಕರ ಬಳಿ ಇಲ್ಲ. ವಿಶ್ವವಿದ್ಯಾಲಯವು ಆನ್‌ಲೈನ್‌ ಬದಲು ಆಫ್‌ಲೈನ್‌ನಲ್ಲಿಯೇ ಪ್ರವೇಶ ಪ್ರಕ್ರಿಯೆ ನಡೆಸಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಎಚ್. ಸುಧಾಕರ್‌ ಒತ್ತಾಯಿಸಿದರು.

‘ಬೆಂಗಳೂರು ನಗರ ಮತ್ತು ಉತ್ತರ ವಿಶ್ವವಿದ್ಯಾಲಯಗಳು ಆಫ್‌ಲೈನ್‌ನಲ್ಲಿಯೇ ಈ ಪ್ರಕ್ರಿಯೆ ನಡೆಸುತ್ತಿವೆ. ಈ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಅವರಿಗೆ ಈ ಬಗ್ಗೆ ಮನವಿ ನೀಡಿ, ಆಫ್‌ಲೈನ್‌ನಲ್ಲಿ ಪ್ರವೇಶ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಿಕೊಂಡಿದ್ದೆ. ಆದರೂ ಆನ್‌ಲೈನ್‌ನಲ್ಲಿಯೇ ನಡೆಸುತ್ತಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಆನ್‌ಲೈನ್‌ನಲ್ಲಿ ಪ್ರವೇಶ ಪ್ರಕ್ರಿಯೆ ನಡೆದರೆ ಹಲವು ವಿದ್ಯಾರ್ಥಿಗಳು ಅವಕಾಶ ವಂಚಿತರಾಗುವ ಸಾಧ್ಯತೆ ಇದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.