ADVERTISEMENT

ಗಲಭೆ ಪ್ರಕರಣ: ಆರೋಪಿ ನವೀನ್‌ ಮನೆಯಲ್ಲಿ ಮಹಜರು, ಮೊಬೈಲ್ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 22:32 IST
Last Updated 15 ಆಗಸ್ಟ್ 2020, 22:32 IST
ಪಿ. ನವೀನ್‌
ಪಿ. ನವೀನ್‌   

ಬೆಂಗಳೂರು: ಅವಹೇಳನಕಾರಿ ಪೋಸ್ಟ್ ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರೋಪಿ ಪಿ. ನವೀನ್‌ನನ್ನು ಮನೆಗೆ ಕರೆದೊಯ್ದು ಪೊಲೀಸರು ಶನಿವಾರ ಮಹಜರು ನಡೆಸಿದರು.

ಮಂಗಳವಾರ ರಾತ್ರಿಯೇ (ಆ. 11) ನವೀನ್‌ನನ್ನು ಬಂಧಿಸಿದ್ದ ಪೊಲೀಸರು, ಅಜ್ಞಾತ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸಿದ್ದರು. ಆತನ ಹೇಳಿಕೆ ಪಡೆದು ನ್ಯಾಯಾಲಯಕ್ಕೂ ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಂಡಿದ್ದರು.

ಆರೋಪಿ ತನ್ನ ಮನೆಯಲ್ಲೇ ಕುಳಿತು ಮೊಬೈಲ್‌ ಮೂಲಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದ. ಹೀಗಾಗಿ, ಪೊಲೀಸರು ಆತನನ್ನು ಕಾವಲ್ ಭೈರಸಂದ್ರದಲ್ಲಿರುವ ಮನೆಗೆ ಶನಿವಾರ ಬೆಳಿಗ್ಗೆ 7.30ರ ಸುಮಾರಿಗೆ ಕರೆತಂದು ಮಾಹಿತಿ ಕಲೆಹಾಕಿದರು. 50ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ನವೀನ್‌ನನ್ನು ಮನೆಗೆ ಕರೆತರಲಾಗಿತ್ತು. ಮನೆಯೊಳಗೆ ಹಾಗೂ ಆತ ಓಡಾಡಿದ್ದ ಜಾಗದಲ್ಲೂ ಕರೆದೊಯ್ದು ಮಹಜರು ಮಾಡಲಾಯಿತು.

ADVERTISEMENT

ಮೊಬೈಲ್ ಪತ್ತೆ: ಮಂಗಳವಾರ ರಾತ್ರಿ ಉದ್ರಿಕ್ತರು ದಾಳಿ ಮಾಡಿದ ಸಂದರ್ಭದಲ್ಲಿ ನವೀನ್ ಮನೆಯಲ್ಲೇ ಇದ್ದ. ಗಾಬರಿಗೊಂಡು ಮನೆ ಹಿಂದಿನ ಬಾಗಿಲಿನಿಂದ ಕಾಂಪೌಂಡ್ ಹಾರಿ ಪರಾರಿಯಾಗಿದ್ದ. ಅದೇ ವೇಳೆ ಆತನ ಮೊಬೈಲ್ ಜೇಬಿನಿಂದ ಕೆಳಗೆ ಬಿದ್ದಿತ್ತು. ಆ ಮೊಬೈಲ್ ಶನಿವಾರ ಪೊಲೀಸರಿಗೆ ಸಿಕ್ಕಿರುವುದಾಗಿ ಗೊತ್ತಾಗಿದೆ.

ಪೊಲೀಸರು ಬಂಧಿಸಿದ್ದ ವೇಳೆ ಮೊಬೈಲ್ ಕಳೆದಿರುವುದಾಗಿ ಆರೋಪಿ ಹೇಳಿದ್ದ. ಇದೀಗ ಪತ್ತೆಯಾಗಿರುವ ಮೊಬೈಲ್‌ನ್ನು ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.