ಬೆಂಗಳೂರು: ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ ಯುವಕನಿಗೆ ಬುದ್ದಿ ಹೇಳಿದವನ ಕುತ್ತಿಗೆ ಕೊಯ್ದು ಕೊಲೆಗೆ ಯತ್ನಿಸಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಕು ಇರಿತದಿಂದ ಗಾಯಗೊಂಡಿರುವ, ಖಾಸಗಿ ಕಂಪನಿಯ ಮಾರಾಟ ಪ್ರತಿನಿಧಿ ಪ್ರಶಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯವೆಸಗಿ ಪರಾರಿಯಾಗಲು ಯತ್ನಿಸಿದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಿವಾಸಿ ಕಾರ್ತಿಕ್ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಎಚ್ಎಎಲ್ ನಿವಾಸಿಯಾಗಿರುವ ಮಹಿಳೆಗೆ ಇನ್‌ಸ್ಟಾಗ್ರಾಮ್ ಮೂಲಕ ಕಾರ್ತಿಕ್ ಪರಿಚಯವಾಗಿತ್ತು. ಪರಸ್ಪರ ಸಂದೇಶ ರವಾನೆ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡಿದ್ದರು. ಈ ನಡುವೆ ಕಾರ್ತಿಕ್ ತನ್ನನ್ನು ಮದುವೆಯಾಗುವಂತೆ ಮಹಿಳೆಗೆ ಪೀಡಿಸುತ್ತಿದ್ದ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳೆ, ಯುವಕನಿಗೆ ಹಲವು ಬಾರಿ ಬುದ್ದಿ ಹೇಳಿದ್ದಾಳೆ. ಆದರೂ ಆತ ವಿವಾಹ ಆಗುವಂತೆ ಕಿರುಕುಳ ನೀಡುತ್ತಿದ್ದ. ಈ ವಿಷಯವನ್ನು ಮಹಿಳೆ ತನ್ನ ತಂದೆ ಶೇಖರ್ ಗಮನಕ್ಕೆ ತಂದಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಜುಲೈ 17ರಂದು ಆರೋಪಿಯು ಶೇಖರ್ ಅವರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಅವರು ತನ್ನ ಅಣ್ಣನ ಮಗ ಪ್ರಶಾಂತ್ ಅವರನ್ನು ಕರೆದುಕೊಂಡು ಜತೆಯಲ್ಲಿ ಹೋಗಿದ್ದಾರೆ. ಕಾರ್ತಿಕ್‌ಗೆ ಬುದ್ದಿ ಹೇಳಲು ದ್ವಿಚಕ್ರ ವಾಹನದಲ್ಲಿ ಮಲ್ಲೇಶ್ ಪಾಳ್ಯ ಬಸ್ ನಿಲ್ದಾಣ ಕಡೆಯಿಂದ ಹೋಗುತ್ತಿದ್ದರು. ಶೇಖರ್ ಅವರು ವಾಹನ ಚಾಲನೆ ಮಾಡುತ್ತಿದ್ದರೆ, ಪ್ರಶಾಂತ್ ಮಧ್ಯ ಕುಳಿತಿದ್ದರು. ಹಿಂದೆ ಕುಳಿತಿದ್ದ ಆರೋಪಿ, ಮಾರ್ಗ ಮಧ್ಯೆ ಪ್ರಶಾಂತ್ ಅವರ ಕುತ್ತಿಗೆ ಕೊಯ್ದಿದ್ದಾನೆ. ತಕ್ಷಣ ವಾಹನ ನಿಲ್ಲಿಸಿದ ಶೇಖರ್ ಅವರ ಮೇಲೂ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ’ ಎಂದು ಹೇಳಿದರು.
‘ತಕ್ಷಣ ಅವರು ತಪ್ಪಿಸಿಕೊಂಡರು. ಕಿರುಚಾಟ ಕೇಳಿ ಜನರು ಸೇರುತ್ತಿದ್ದಂತೆ ಆರೋಪಿ ಪರಾರಿಯಾದ. ಗಾಯಗೊಂಡಿದ್ದ ಪ್ರಶಾಂತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದರು.
ಶೇಖರ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ,
ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.