ADVERTISEMENT

ಬೆಸ್ಕಾಂ: ಬಿಲ್‌ ನೋಡಿ ಬೆದರಿದ ಗ್ರಾಹಕ !

​ಪ್ರಜಾವಾಣಿ ವಾರ್ತೆ
Published 2 ಮೇ 2020, 20:24 IST
Last Updated 2 ಮೇ 2020, 20:24 IST
   

ಬೆಂಗಳೂರು: ಲಾಕ್‌ಡೌನ್‌ ಜಾರಿಯಲ್ಲಿರುವ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಮೀಟರ್‌ ರೀಡಿಂಗ್‌ ನೋಡಿ ವಿದ್ಯುತ್‌ ಬಿಲ್‌ ಕೊಡಲು ಸಾಧ್ಯವಾಗದ ಕಾರಣ ಬೆಸ್ಕಾಂ ವಿದ್ಯುತ್‌ ಯುನಿಟ್‌ ಬಳಕೆಯ ಸರಾಸರಿ ಆಧಾರದಲ್ಲಿ ಗ್ರಾಹಕರಿಗೆ ಬಿಲ್‌ ನೀಡಿತ್ತು. ಆದರೆ, ‘ಈ ತಿಂಗಳು ದುಪ್ಪಟ್ಟು ಮೊತ್ತದ ಬಿಲ್‌ ನೀಡಲಾಗಿದೆ’ ಎಂದು ಗ್ರಾಹಕರು ದೂರಿದ್ದಾರೆ.

‘ಮಾರ್ಚ್‌ ತಿಂಗಳ ವಿದ್ಯುತ್‌ ಬಿಲ್‌ ಅನ್ನು ಏಪ್ರಿಲ್‌ನಲ್ಲಿ ನೀಡಿದ್ದರು. ಮೀಟರ್‌ ನೋಡದೆ, ಸರಾಸರಿ ಶುಲ್ಕ ವಿಧಿಸಿದ್ದರು. ಅದರಂತೆ ಶುಲ್ಕ ಪಾವತಿಸಿದ್ದೆವು. ಈಗ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಬಳಸಿದ ಯುನಿಟ್‌ ಆಧರಿಸಿ ಬಿಲ್‌ ನೀಡಿದ್ದಾರೆ. ಆದರೆ, ಸರಾಸರಿ ವಿದ್ಯುತ್‌ ಬಳಕೆ ಆಧಾರದಲ್ಲಿ ಲೆಕ್ಕ ಹಾಕಿದರೂ ಈ ಬಿಲ್‌ ಮೊತ್ತ ದುಪ್ಪಟ್ಟಾಗಿದೆ’ ಎಂದು ಎಸ್. ಸರ್ಕಾರ್‌ ಎಂಬುವರು ಟ್ವಿಟರ್‌ನಲ್ಲಿ ದೂರಿದ್ದಾರೆ.

‘ಪ್ರತಿ ತಿಂಗಳು ₹500ರಿಂದ ₹600 ಸರಾಸರಿ ವಿದ್ಯುತ್‌ ಬಿಲ್‌ ಬರುತ್ತಿತ್ತು. ಅದರಂತೆ, ಏಪ್ರಿಲ್‌ನಲ್ಲಿ ನಾನು ₹547 ಬಿಲ್‌ ಕಟ್ಟಿದ್ದೇನೆ. ಆದರೆ, ಬೆಸ್ಕಾಂನವರು ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಬಳಸಿದ ವಿದ್ಯುತ್‌ ಆಧಾರದ ಮೇಲೆ ₹1,426 ಬಿಲ್‌ ಕಳಿಸಿದ್ದಾರೆ’ ಎಂದು ಬಿಲ್‌ ಚಿತ್ರವನ್ನು ಟ್ವೀಟ್‌ ಜೊತೆ ಹಂಚಿಕೊಂಡಿದ್ದಾರೆ.

ADVERTISEMENT

‘ಮಾರ್ಚ್‌ನಲ್ಲಿ ಯಾವುದೇ ಮೀಟರ್‌ ನೋಡದೆ ಬಿಲ್‌ ನೀಡಿ, ಗ್ರಾಹಕರಿಂದ ಸರಾಸರಿ ವಿದ್ಯುತ್‌ ಬಳಕೆ ಆಧಾರದಲ್ಲಿ ಆ ತಿಂಗಳ ಶುಲ್ಕ ಪಡೆಯಲಾಗಿತ್ತು. ಸರ್ಕಾರ್‌ ಅವರು ತಿಂಗಳಿಗೆ 292 ಯುನಿಟ್‌ ವಿದ್ಯುತ್‌ ಬಳಸಿದ್ದಾರೆ. ಅಂದರೆ ಒಟ್ಟು ಮೊತ್ತ ₹1,973 ಆಗುತ್ತದೆ. ಈ ಪೈಕಿ, ಅವರು ಪಾವತಿಸಿದ ₹547 ಕಳೆದು, ₹1,426 ಬಿಲ್‌ ನೀಡಲಾಗಿದೆ. 30 ದಿನಗಳ ಬದಲಿಗೆ, 60 ದಿನಗಳ ಶುಲ್ಕ ಒಮ್ಮೆಗೆ ನೀಡಿದ್ದಕ್ಕೆ ಬಿಲ್‌ ಮೊತ್ತ ಹೆಚ್ಚು ಎನಿಸುತ್ತದೆ. ಆದರೆ, ಬಿಲ್‌ ನೀಡುವುದರಲ್ಲಿ ಯಾವುದೇ ತಪ್ಪಾಗಿಲ್ಲ’ ಎಂದು ಬೆಸ್ಕಾಂನ ಸಹಾಯವಾಣಿ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ತಿಂಗಳಲ್ಲಿ ಬಳಸಿದ ಒಟ್ಟು ಯುನಿಟ್‌ಗಳನ್ನು ಪರಿಗಣಿಸಿದರೆ ವಿದ್ಯುತ್‌ ಶುಲ್ಕ ಹೆಚ್ಚಾಗುತ್ತದೆ ಎಂದು ಗ್ರಾಹಕರು ದೂರುವುದು ಸರಿಯಲ್ಲ. ಮೊದಲು, ಸೊನ್ನೆಯಿಂದ 30 ಯುನಿಟ್‌ವರೆಗಿನ ಪ್ರತಿ ಯುನಿಟ್‌ಗೆ ₹3.75 ಪೈಸೆ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಸೊನ್ನೆಯಿಂದ 60 ಯುನಿಟ್‌ವರೆಗಿನ ಪ್ರತಿ ಯುನಿಟ್‌ ಬಳಕೆಗೆ ₹3.75 ಪೈಸೆ ವಿಧಿಸಲಾಗಿದೆ. ಒಟ್ಟು ಬಿಲ್‌ ಮೊತ್ತವನ್ನು ಎರಡರಿಂದ ವಿಭಾಗಿಸಿದರೆ ತಿಂಗಳಿಗೆ ಮೊದಲು ಬರುತ್ತಿದ್ದಷ್ಟೇ ಶುಲ್ಕ ಬಂದಂತಾಗುತ್ತದೆ. ಬೆಸ್ಕಾಂ ತಪ್ಪಾಗಿ ಬಿಲ್‌ ನೀಡಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.