ADVERTISEMENT

ವಿದ್ಯುತ್ ಬಿಲ್ ಹೆಸರಿನಲ್ಲಿ ₹ 2.51 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 21:15 IST
Last Updated 1 ಜುಲೈ 2022, 21:15 IST

ಬೆಂಗಳೂರು: ಬೆಸ್ಕಾಂ ವಿದ್ಯುತ್ ಬಿಲ್ ಪಾವತಿ ಹೆಸರಿನಲ್ಲಿ ನಗರದ ನಿವಾಸಿಗಳಿಬ್ಬರ ಬ್ಯಾಂಕ್ ಖಾತೆಯಿಂದ ₹ 2.51 ಲಕ್ಷ ವರ್ಗಾಯಿಸಿಕೊಂಡು ವಂಚಿಸಲಾಗಿದ್ದು, ಈ ಬಗ್ಗೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

‘ಬೆಸ್ಕಾಂ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡಿದ್ದ ಸೈಬರ್ ವಂಚಕರು, ನಿವಾಸಿಗಳ ವೈಯಕ್ತಿಕ ಮಾಹಿತಿ ಪಡೆದು ವಂಚಿಸಿದ್ದಾರೆ. ಹಣ ಕಳೆದುಕೊಂಡಿರುವ ನಿವಾಸಿಗಳು ನೀಡಿರುವ ದೂರು ಆಧರಿಸಿ ದಕ್ಷಿಣ ಹಾಗೂ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

₹ 1.53 ಲಕ್ಷ ವಂಚನೆ: ‘ಸದಾಶಿವನಗರ ನಿವಾಸಿ ಮಂಜರಿ ಅವರಿಗೆ ಜೂನ್ 24ರಂದು ಕರೆ ಮಾಡಿದ್ದ ಆರೋ‍ಪಿ, ‘ನಿಮ್ಮ ಮನೆಯ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಕೂಡಲೇ ಪಾವತಿ ಮಾಡದಿದ್ದರೆ, ಸಂಪರ್ಕ ಕಡಿತಗೊಳಿಸಲಾಗುವುದು’ ಎಂದಿದ್ದ. ಬಿಲ್ ಪಾವತಿಸುವಂತೆ ಹೇಳಿ ಆ್ಯಪೊಂದರ ಲಿಂಕ್ ಕಳುಹಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಆ್ಯಪ್ ಡೌನ್‌ಲೋಡ್ ಮಾಡಿದ್ದ ಮಂಜರಿ, ಬಿಲ್ ಪಾವತಿಸಲೆಂದು ವೈಯಕ್ತಿಕ ಮಾಹಿತಿ ನಮೂದಿಸಿದ್ದರು. ಇದಾದ ಕೆಲ ನಿಮಿಷಗಳಲ್ಲೇ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹ 1.53 ಲಕ್ಷ ಡ್ರಾ ಆಗಿದೆ’ ಎಂದೂ ಹೇಳಿವೆ.

₹ 98,500 ವಂಚನೆ: ‘ಪದ್ಮನಾಭನಗರದ ನಿವಾಸಿ ನಾರಾಯಣ ಅವರಿಗೆ ಜೂನ್ 28ರಂದು ಕರೆ ಬಂದಿತ್ತು. ಬೆಸ್ಕಾಂ ಪ್ರತಿನಿಧಿ ಎಂದಿದ್ದ ಆರೋಪಿ, ಬಿಲ್ ಪಾವತಿಸುವಂತೆ ಹೇಳಿ ಆ್ಯಪ್‌ ಒಂದನ್ನು ಡೌನ್‌ಲೋಡ್‌ ಮಾಡಿಸಿದ್ದ. ಆರೋಪಿ ಮಾತು ನಂಬಿದ್ದ ನಾರಾಯಣ, ವೈಯಕ್ತಿಕ ವಿವರ ನಮೂದಿಸಿದ್ದರು. ಇದಾದ ನಂತರ, ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹ 98,500 ಕಡಿತವಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.