ADVERTISEMENT

ವಿದ್ಯುತ್‌ ಕೇಬಲ್ ಕಾಮಗಾರಿ: ವರದಿ ಕೇಳಿದ ಸಚಿವ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 16:22 IST
Last Updated 10 ಜನವರಿ 2022, 16:22 IST
ವಿದ್ಯಾರಣ್ಯಪುರದಲ್ಲಿ ನೆಲದ ಮೇಲೆಯೇ ಬಿದ್ದಿರುವ ವಿದ್ಯುತ್ ಕೇಬಲ್ –ಪ್ರಜಾವಾಣಿ ಚಿತ್ರ
ವಿದ್ಯಾರಣ್ಯಪುರದಲ್ಲಿ ನೆಲದ ಮೇಲೆಯೇ ಬಿದ್ದಿರುವ ವಿದ್ಯುತ್ ಕೇಬಲ್ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ನೆಲದೊಳಗೆ ವಿದ್ಯುತ್‌ ಕೇಬಲ್ ಅಳವಡಿಕೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಇಂಧನ ಸಚಿವ ವಿ. ಸುನಿಲ್‌ಕುಮಾರ್ ಅವರು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ಕಂಬಗಳಲ್ಲಿನ ತಂತಿಗಳ ಮೂಲಕ ವಿದ್ಯುತ್ ಸರಬರಾಜು ಮಾಡುವುದನ್ನು ತಪ್ಪಿಸಿ ನೆಲದೊಳಗೆ ಕೇಬಲ್‌ಗಳನ್ನು ತೂರಿಸುವ ಯೋಜನೆಯನ್ನು 2018–19ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಘೋಷಣೆ ಮಾಡಿತ್ತು. ಬೆಸ್ಕಾಂ ವ್ಯಾಪ್ತಿಯಲ್ಲಿನ 63 ಉಪವಿಭಾಗಗಳ ಪೈಕಿ 52 ಉಪ ವಿಭಾಗಗಳಲ್ಲಿ 6 ಸಾವಿರ ಕಿ.ಮೀ.ನಲ್ಲಿ 11 ಕೆ.ವಿ ವಿದ್ಯುತ್ ಮೇಲ್ಮಾರ್ಗಗಳನ್ನು ನೆಲದೊಳಗೆ ಹುದುಗಿಸುವ ಕಾಮಗಾರಿಯನ್ನು ಬೆಸ್ಕಾಂ ಆರಂಭಿಸಿದೆ.

ಬೆಸ್ಕಾಂ ಜಾಲಹಳ್ಳಿ ವಿಭಾಗ ವ್ಯಾಪ್ತಿಯಲ್ಲಿನ ವಿದ್ಯಾರಣ್ಯಪುರ, ಕೊಡಿಗೇಹಳ್ಳಿ, ವಿರೂಪಾಕ್ಷಾಪುರ, ಎಂ.ಎಸ್. ಪಾಳ್ಯದಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಬೆಸ್ಕಾಂಗೆ ದೂರು ನೀಡಿದ್ದರು. ಈ ಸಂಬಂಧ ‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿ ವಿಸ್ತೃತ ವರದಿಯನ್ನು ಡಿ.21ರಂದು ಪ್ರಕಟಿಸಿತ್ತು.

ADVERTISEMENT

ಈ ಬಗ್ಗೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಸಚಿವರು, ಮೂರು ದಿನಗಳಲ್ಲಿ ವರದಿ ನೀಡಬೇಕು ಎಂದು ತಿಳಿಸಿದ್ದಾರೆ.

ತನಿಖೆ ಬಗ್ಗೆ ಪ್ರತಿಕ್ರಿಯಿಸಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ‘ಯೋಜನಾ ನಿರ್ವಹಣಾ ಸಲಹೆಗಾರರಿಂದ (ಪಿಎಂಸಿ) ವರದಿ ಕೇಳಿದ್ದೇನೆ. ಬೆಸ್ಕಾಂ ವ್ಯಾಪ್ತಿಯಲ್ಲಿ 12 ಪಿಎಂಸಿ ತಂಡಗಳಿದ್ದು, ತನಿಖೆ ನಡೆಯುತ್ತಿದೆ. ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.