ADVERTISEMENT

ಬೆಟ್ಟಹಲಸೂರು ಮೆಟ್ರೊ ನಿಲ್ದಾಣ ಮರು ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 18:47 IST
Last Updated 8 ಡಿಸೆಂಬರ್ 2022, 18:47 IST
   

ಬೆಂಗಳೂರು: ವಿಮಾನ ನಿಲ್ದಾಣ ಮೆಟ್ರೊ ರೈಲು ಮಾರ್ಗದಲ್ಲಿ ಕೈಬಿಡಲಾಗಿದ್ದ ಬೆಟ್ಟಹಲಸೂರು ನಿಲ್ದಾಣ ಮರು ಸೇರ್ಪಡೆಗೆ ಮಾತುಕತೆ ಆರಂಭವಾಗಿದೆ. ರಿಯಲ್ ಎಸ್ಟೇಟ್ ಕಂಪನಿ ಎಂಬೆಸ್ಸಿ ಗ್ರೂಪ್ ಜತೆ ಬಿಎಂಆರ್‌ಸಿಎಲ್ ಮತ್ತೊಮ್ಮೆ ಪತ್ರ ವ್ಯವಹಾರ ಆರಂಭಿಸಿದೆ.

ಈ ಮಾರ್ಗದ ಮೂಲ ಯೋಜನೆಯಲ್ಲಿ ಬೆಟ್ಟಹಲಸೂರು ನಿಲ್ದಾಣದ ಪ್ರಸ್ತಾಪ ಇರಲಿಲ್ಲ. ಎಂಬೆಸ್ಸಿ ಗ್ರೂಪ್ ಆಸಕ್ತಿ ತೋರಿದ್ದರಿಂದ ಬಾಗಲೂರು ಕ್ರಾಸ್ ಮತ್ತು ದೊಡ್ಡಜಾಲ ನಿಲ್ದಾನಗಳ ನಡುವೆ ಬೆಟ್ಟಹಲಸೂರು ಮೆಟ್ರೊ ರೈಲು ನಿಲ್ದಾಣ ನಿರ್ಮಿಸಲು ಯೋಜನೆ ಬದಲಿಸಲಾಯಿತು. ಈ ನಿಲ್ದಾಣ ನಿರ್ಮಾಣಕ್ಕೆ ₹140 ಕೋಟಿ ವೆಚ್ಚವನ್ನು ಹೂಡಿಕೆ ಮಾಡಲು ಎಂಬೆಸ್ಸಿ ಗ್ರೂಪ್ ಮುಂದೆ ಬಂದಿತ್ತು. ಈ ಸಂಬಂಧ ನಿಗಮದೊಂದಿಗೆ ಒಡಂಬಡಿಕೆಯೂ ನಡೆದಿತ್ತು.

ಬಳಿಕ ಎಂಬೆಸ್ಸಿ ಗ್ರೂಪ್ ನಿರಾಸಕ್ತಿ ವಹಿಸಿದ್ದರಿಂದ ಕೈಬಿಡಲು ಉದ್ದೇಶಿಸಲಾಗಿತ್ತು. ಅಲ್ಲದೇ ಚಿಕ್ಕಜಾಲ ಬಳಿ ನಿಲ್ದಾಣ ನಿರ್ಮಿಸಲು ಬಿಎಂಆರ್‌ಸಿಎಲ್ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಇದೀಗ ಮತ್ತೆ ಎಂಬೆಸ್ಸಿ ಗ್ರೂಪ್‌ನಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಪೂರಕ ಸ್ಪಂದನೆ ದೊರೆತಿರುವುದರಿಂದ ಈ ನಿಲ್ದಾಣವನ್ನು ಯೋಜನೆಯಲ್ಲಿ ಮರು ಸೇರ್ಪಡೆ ಮಾಡಲು ಚಿಂತಿಸಲಾಗಿದೆ. ಮತ್ತೊಮ್ಮೆ ಮಾತುಕತೆ ನಡೆಸಿ ಖಚಿತಪಡಿಸಿಕೊಳ್ಳಲಾಗುವುದು’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.