ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ಸಹಯೋಗಕ್ಕೆ 25 ವರ್ಷಗಳು ಸಂದಿವೆ. ರಜತ ಮಹೋತ್ಸವದ ಪ್ರಯುಕ್ತ ಜಂಟಿಯಾಗಿ ದೇಶದಾದ್ಯಂತ 300ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ರಜತಮಹೋತ್ಸವದ ಭಾಗವಾಗಿ ಈ ವರ್ಷ 150 ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮುಂದಿನ ವರ್ಷವೂ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. 300ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ 4,600ಕ್ಕೂ ಹೆಚ್ಚು ಕಲಾವಿದರಿಗೆ ವೇದಿಕೆ ಕಲ್ಪಿಸಲಾಗುತ್ತದೆ. ಇಲ್ಲಿನ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಗ್ಯಾಲರಿಯಲ್ಲಿ ಇದೇ 28ರಿಂದ ಆ.8ರವರೆಗೆ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ. ರಾವ್ ತಿಳಿಸಿದ್ದಾರೆ.
‘ಚಂಡೀಗಡದಲ್ಲಿ ‘ವಸುದೈವ ಕುಟುಂಬಕಂ’, ಭುವನೇಶ್ವರದಲ್ಲಿ ‘ಲಲಿತ ಕಲೆಗಳಲ್ಲಿ ಮಾನವೀಯ ಮೌಲ್ಯಗಳು’, ಜೈಪುರದಲ್ಲಿ ‘ಜಾನಪದ ಮತ್ತು ಬುಡಕಟ್ಟು ಸಂಸ್ಕೃತಿಯ ಹಬ್ಬಗಳು’, ಪುಣೆಯಲ್ಲಿ ‘ಕಥಾ ಕೀರ್ತನ’, ‘ನಾಗಪುರದಲ್ಲಿ ಕಲೆಗಳ ಮೂಲಕ ಭಾರತೀಯ ಇತಿಹಾಸ’, ತಿರುವನಂತಪುರದಲ್ಲಿ ‘ಪಂಚಭೂತಗಳು’, ಕೊಲ್ಕತ್ತಾದಲ್ಲಿ ‘ಕಾವ್ಯ-ನೃತ್ಯ-ಚಿತ್ರ’, ಬೆಂಗಳೂರಿನಲ್ಲಿ ‘ಪ್ಯೂಷನ್ ಸಂಗೀತ ಮತ್ತು ನೃತ್ಯ ಉತ್ಸವ’ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ಅಳಿವಿನಂಚಿನಲ್ಲಿರುವ ಭಾರತೀಯ ಜಾನಪದ ಮತ್ತು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ಇದಾಗಿದ್ದು, ಈ ಯೋಜನೆಯಲ್ಲಿ ಯುವ ಮತ್ತು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವಕಾಶ ಒದಗಿಸಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.