ADVERTISEMENT

ಫೆ. 26 ರಿಂದ ಮಾರ್ಚ್‌ 4 ರವರೆಗೆ ಚಿತ್ರೋತ್ಸವ

ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 19:35 IST
Last Updated 9 ಜನವರಿ 2020, 19:35 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಲಾಂಛನ ಬಿಡುಗಡೆ ಮಾಡಿದರು. ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್‌ ಪುರಾಣಿಕ್‌, ಶಾಸಕ ಎಸ್.ಆರ್.ವಿಶ್ವನಾಥ್ ಇದ್ದಾರೆ –ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಲಾಂಛನ ಬಿಡುಗಡೆ ಮಾಡಿದರು. ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್‌ ಪುರಾಣಿಕ್‌, ಶಾಸಕ ಎಸ್.ಆರ್.ವಿಶ್ವನಾಥ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: 12 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರುವರಿ 26 ರಿಂದ ಮಾರ್ಚ್‌ 4 ರವರೆಗೆ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ಚಲನ ಚಿತ್ರೋತ್ಸವದ ಲಾಂಛನ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಈ ಬಾರಿ50 ದೇಶಗಳ ಸುಮಾರು 200 ಸಮಕಾಲೀನ ಚಲನಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶಿತಗೊಳ್ಳಲಿವೆ ಎಂದು ಹೇಳಿದರು.

ಬೆಂಗಳೂರು ನಗರಕ್ಕೆ ವಿಶ್ವ ಸಿನಿಮಾವನ್ನು ಪರಿಚಯಿಸುವುದೇ ಚಲನಚಿತ್ರೋತ್ಸವದ ಮುಖ್ಯ ಉದ್ದೇಶ. ಇದನ್ನು ‘ಬೆಂಗಳೂರಿನಲ್ಲಿ ಜಗತ್ತು’ ಎಂದೇ ಬಣ್ಣಿಸಲಾಗುತ್ತದೆ. ಕನ್ನಡ ಸಿನಿಮಾದ ಸೃಜನಶೀಲ ಮುಖಗಳನ್ನು ವಿಶ್ವದ ನಾನಾ ರಾಷ್ಟ್ರಗಳಿಗೆ ಪರಿಚಯಿಸುವ ಕೆಲಸವೂ ನಡೆಯಲಿದೆ ಎಂದು ಅವರು ಹೇಳಿದರು.

ADVERTISEMENT

ಫೆಬ್ರುವರಿ 26 ರ ಬುಧವಾರ ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟಕರು ಯಾರು ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕು. ಮಾರ್ಚ್‌ 4 ರಂದು ಸಮಾರೋಪ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನವೂ ನಡೆಯಲಿದೆ ಎಂದರು.

ರಾಜಾಜಿನಗರದ ಒರೆಯಾನ್‌ ಮಾಲ್‌ನ 11 ಪರದೆಗಳಲ್ಲಿ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಏಳು ದಿನಗಳ ಸಿನಿಮೋತ್ಸವದಲ್ಲಿ ಒಟ್ಟು 14 ವಿಭಾಗಗಳಿದ್ದು, ಚಲನಚಿತ್ರೋದ್ಯಮದ ಎಲ್ಲ ವಿಭಾಗಗಳನ್ನು ಪ್ರತಿನಿಧಿಸಲಿದೆ. ವಿಶ್ವ ಸಿನಿಮಾ, ಚಿತ್ರ ಭಾರತಿ, ಭಾರತೀಯ ಚಿತ್ರಗಳ ಸ್ಪರ್ಧಾ ವಿಭಾಗ, ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಚಲನಚಿತ್ರ ವಿಮರ್ಶಕರ ಅಂತರ ರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ಪಡೆದ ಚಿತ್ರಗಳು, ಏಷಿಯನ್‌ ಸಿನಿಮಾ, ನೆಟ್‌ ಪ್ಯಾಕ್‌, ಆತ್ಮ ಚರಿತ್ರೆ ಆಧರಿತ ಚಿತ್ರಗಳು, ಉಪಭಾಷಾ ಚಿತ್ರಗಳು, ನಟ, ಕಲಾವಿದ, ತಂತ್ರಜ್ಞರ ಸಿಂಹಾವಲೋಕನ, ವಿಶೇಷ ವಸ್ತು ಆಧಾರಿತ ಚಿತ್ರಗಳು, ಕಣ್ಮರೆಯಾದ ನಟ, ನಿರ್ದೇಶಕರ ಸ್ಮರಣೆ, ಸಾಕ್ಷ್ಯ ಚಿತ್ರಗಳು ಚಿತ್ರ ಲೋಕದ ವೈವಿಧ್ಯತೆ ತೆರೆದಿಡಲಿದೆ ಎಂದರು.

ಪ್ರತಿನಿಧಿ ಶುಲ್ಕ ₹800, ಸಿನಿಮಾ ವಿದ್ಯಾರ್ಥಿಗಳಿಗೆ ಮತ್ತು ಚಲನಚಿತ್ರರಂಗದವರಿಗೆ ₹400 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಸಿನಿಮಾ ಬೆಳವಣಿಗೆ ಕುರಿತಂತೆ ಸಂವಾದ, ಉಪನ್ಯಾಸ, ಚಲನಚಿತ್ರ ತಯಾರಿಕೆ, ಚಲನಚಿತ್ರ ಕಲೆ ರಸಗ್ರಹಣ ಶಿಬಿರ, ವಿಚಾರಸಂಕಿರಣ, ಕಾರ್ಯಾಗಾರ, ಮಾಸ್ಟರ್‌ ಕ್ಲಾಸ್‌ ವಿಭಾಗದಲ್ಲಿ ಸಿನಿಮಾ ತಜ್ಞರಿಂದ ಉಪನ್ಯಾಸ ನಡೆಯಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.