ADVERTISEMENT

ಚಪ್ಪಲಿಯಿಂದ ಹಲ್ಲೆ ಪ್ರಕರಣ: ಆಟೊ ಚಾಲಕನ ಬಳಿ ಕ್ಷಮೆ ಕೋರಿದ ಬಿಹಾರದ ಮಹಿಳೆ 

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:20 IST
Last Updated 2 ಜೂನ್ 2025, 14:20 IST
ಆಟೊ ಚಾಲಕ ಲೋಕೇಶ್ ಅವರ ಬಳಿ ಕ್ಷಮೆ ಕೋರಿದ ಸಾಫ್ಟ್‌ವೇರ್ ಎಂಜಿನಿಯರ್‌ ಫಂಕುನಿ ಮಿಶ್ರಾ ಹಾಗೂ ಅವರ ಪತಿ 
ಆಟೊ ಚಾಲಕ ಲೋಕೇಶ್ ಅವರ ಬಳಿ ಕ್ಷಮೆ ಕೋರಿದ ಸಾಫ್ಟ್‌ವೇರ್ ಎಂಜಿನಿಯರ್‌ ಫಂಕುನಿ ಮಿಶ್ರಾ ಹಾಗೂ ಅವರ ಪತಿ    

ಬೆಂಗಳೂರು: ಬೆಳ್ಳಂದೂರು ಸೆಂಟ್ರಲ್‌ ಮಾಲ್‌ ಬಳಿ ಆಟೊ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಬಿಹಾರದ ಸಾಫ್ಟ್‌ವೇರ್ ಎಂಜಿನಿಯರ್‌ ಫಂಕುನಿ ಮಿಶ್ರಾ ಅವರು ಆಟೊ ಚಾಲಕ ಲೋಕೇಶ್‌ ಹಾಗೂ ಅವರ ಕುಟುಂಬಸ್ಥರ ಕಾಲು ಹಿಡಿದು ಕ್ಷಮೆಯಾಚನೆ ಮಾಡಿದ್ದಾರೆ.

ಅಲ್ಲದೇ ಎಲ್ಲ ಕನ್ನಡಿಗರೂ ಕ್ಷಮಿಸಬೇಕು ಎಂದು ಕೋರಿದ್ದು, ದೂರನ್ನು ವಾಪಸ್ ಪಡೆಯುವಂತೆ ಆಟೊ ಚಾಲಕನ ಬಳಿ ಮನವಿ ಮಾಡಿದ್ದಾರೆ.

ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಮಾಲ್‌ ಬಳಿ ಆಟೊವನ್ನು ಎಡಕ್ಕೆ ತಿರುಗಿಸಿಕೊಂಡು ತೆರಳುವಾಗ ಬಲಭಾಗದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರು, ಇಳಿದು ಗಲಾಟೆ ಮಾಡಿದ್ದರು. ‘ದ್ವಿಚಕ್ರ ವಾಹನಕ್ಕೆ ಆಟೊ ತಾಗಿಸಿದ್ದೀಯಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ದ್ವಿಚಕ್ರ ವಾಹನದ ಹಿಂದೆ ಕುಳಿತಿದ್ದ ಯುವತಿ ಚಪ್ಪಲಿ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಳು ಎಂದು ಆರೋಪಿಸಿ ಲೋಕೇಶ್ ನೀಡಿದ ದೂರು ಆಧರಿಸಿ ಫಂಕುನಿ ಮಿಶ್ರಾ ಅವರ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ADVERTISEMENT

ಮಹಿಳೆಯನ್ನು ಭಾನುವಾರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದ ಪೊಲೀಸರು ಫಂಕುನಿ ಮಿಶ್ರಾ ಅವರ ಹೇಳಿಕೆ ದಾಖಲಿಸಿಕೊಂಡಿದ್ದರು. ವಿಚಾರಣೆ ವೇಳೆ ಮಹಿಳೆಯು ಆಟೊ ಚಾಲಕನ ಮೇಲೆ ಹಲ್ಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದರು. ಇದರ ಬೆನ್ನಲ್ಲೇ ಚಾಲಕರ ಸಂಘದ ಪದಾಧಿಕಾರಿಗಳ ಎದುರು ಆಟೊ ಚಾಲಕನ ಬಳಿ ಕ್ಷಮೆ ಕೇಳಿದ್ದಾರೆ.

ಬಿಹಾರದ ಫಂಕುನಿ ಮಿಶ್ರಾ ಅವರು ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಕುಟುಂಬದ ಸದಸ್ಯರ ಜೊತೆಗೆ ಬೆಳ್ಳಂದೂರು ಬಳಿಯ ಗ್ರೀನ್‌ ಗ್ಲೆನ್‌ ಲೇಔಟ್‌ನಲ್ಲಿ ನೆಲಸಿದ್ದಾರೆ.

‘ಭಯದಲ್ಲಿ ಹಲ್ಲೆ ಮಾಡಿದ್ದೆ’:

‘ಬೆಳ್ಳಂದೂರು ಸೆಂಟ್ರಲ್‌ ಮಾಲ್‌ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಆಟೊ ತಾಗಿತ್ತು. ಗರ್ಭಿಣಿಯಾಗಿದ್ದು, ಅಪಘಾತವಾಗಿ ಏನಾದರೂ ತೊಂದರೆಯಾದರೆ ಎನ್ನುವ ಭಯದಲ್ಲಿ ಹಲ್ಲೆ ಮಾಡಿದ್ದೆ. ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿಲ್ಲ. ಈ ವಿಚಾರಕ್ಕೆ ನಾನು ನಿಮ್ಮಲ್ಲಿ ಹಾಗೂ ನಿಮ್ಮ ಕುಟುಂಬದವರಲ್ಲಿ ಕ್ಷಮೆ ಕೇಳುತ್ತೇನೆ’ ಎಂದು ಫಂಕುನಿ ಮಿಶ್ರಾ ಅವರು ಆಟೊ ಚಾಲಕ ಮತ್ತು ಅವರ ಕುಟುಂಬದವರ ಎದುರು ಹೇಳಿದರು. ಅದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

‘ಬೆಂಗಳೂರು ಅಂದರೆ ತುಂಬಾ ಇಷ್ಟ. ಇಲ್ಲಿನ ಸಂಸ್ಕೃತಿಯನ್ನು ಗೌರವಿಸುತ್ತೇನೆ. ಆಟೊ ಚಾಲಕರನ್ನೂ ಗೌರವಿಸುತ್ತೇವೆ’ ಎಂದು ಮಹಿಳೆಯ ಪತಿ ಹೇಳಿದ್ದಾರೆ.

ಚಪ್ಪಲಿಯಿಂದ ಹಲ್ಲೆ ನಡೆಸಿದ್ದ ಫಂಕುನಿ ಮಿಶ್ರಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.