ADVERTISEMENT

154 ಎಕರೆಯಲ್ಲಿ ಜೈವಿಕ ಉದ್ಯಾನ: ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 16:24 IST
Last Updated 2 ಜೂನ್ 2025, 16:24 IST
ಮಾದಪ್ಪನಹಳ್ಳಿ ಅರಣ್ಯ ಪ್ರದೇಶದಲ್ಲಿ ಈಶ್ವರ ಬಿ ಖಂಡ್ರೆ ಸಸಿ ನೆಟ್ಟರು
ಮಾದಪ್ಪನಹಳ್ಳಿ ಅರಣ್ಯ ಪ್ರದೇಶದಲ್ಲಿ ಈಶ್ವರ ಬಿ ಖಂಡ್ರೆ ಸಸಿ ನೆಟ್ಟರು   

ಯಲಹಂಕ: ಮಾದಪ್ಪನಹಳ್ಳಿಯಲ್ಲಿರುವ 154 ಎಕರೆ ಅರಣ್ಯ ಭೂಮಿಯಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಬೃಹತ್‌ ಜೈವಿಕ ಉದ್ಯಾನ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಮಾದಪ್ಪನಹಳ್ಳಿಯ ನೆಡುತೋಪಿನಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ವಶದಲ್ಲಿರುವ ಭೂಮಿಯನ್ನು ಹಿಂದಕ್ಕೆ ಪಡೆಯುವ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಉದ್ಯಾನ ಬೆಂಗಳೂರಿಗೆ ಮಹತ್ವದ ಶ್ವಾಸ ತಾಣವಾಗಲಿದೆ ಎಂದರು.

ಈ ಜಾಗದಲ್ಲಿ ಕೆಎಫ್‌ಡಿಸಿ ನೀಲಗಿರಿ ಮರಗಳನ್ನು ಬೆಳೆಸಿದ್ದು, ಈ ಎಲ್ಲ ಮರಗಳನ್ನು ತೆರವು ಮಾಡಿ, ಸ್ಥಳೀಯ ಪ್ರಭೇದದ ಬಿಲ್ವ, ಮಹಾಬಿಲ್ವ ಹೊನ್ನೆ ನೇರಳೆ, ಮತ್ತಿ, ಆಲ, ಅರಳಿಯ ಜೊತೆಗೆ ಪಶ್ಚಿಮಘಟ್ಟದಲ್ಲಿ ಬೆಳೆಯುವ ವಿವಿಧ ಪ್ರಭೇದದ ಸಸ್ಯಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಈ ಪ್ರದೇಶದಲ್ಲಿ ಹೊನ್ನೆ, ಬೀಟೆ, ಜಾಲಿ, ಕಗ್ಗಲಿ, ಎಲಚಿ, ಚಿಗರೆ ಹೊಳೆಮತ್ತಿ, ಕರಿಮತ್ತಿ ಮತ್ತಿತರ 800 ಮರಗಳಿದ್ದು, ಅವುಗಳನ್ನು ಸಂರಕ್ಷಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಎಲ್ಲ 154 ಎಕರೆ ಅರಣ್ಯಭೂಮಿಗೂ ಕಾಂಪೌಂಡ್‌ ಹಾಕಲಾಗಿದ್ದು, ಒತ್ತುವರಿ ಆಗದಂತೆ ರಕ್ಷಿಸಲಾಗಿದೆ. ಈ ಪ್ರದೇಶದಲ್ಲಿ ಇಂದಿರಾಗಾಂಧಿ ಜೈವಿಕ ಉದ್ಯಾನ, ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಪಕ್ಷಿಲೋಕ, ವಿಶ್ವಗುರು ಬಸವಣ್ಣ ದಿವ್ಯೌಷಧೀಯ ಸಸ್ಯವನ, ಕೆಂಪೇಗೌಡ ಕಿರು ಮೃಗಾಲಯ ಹಾಗೂ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಿಸಲು ಸಲಹೆಗಳು ಬಂದಿದ್ದು, ಈ ಬಗ್ಗೆ ಯೋಜನೆ ರೂಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಂದ ಎರಡು ತಿಂಗಳಲ್ಲಿ ಉದ್ಯಾನನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಿಎಸ್‌ಆರ್‌ ನಿಧಿ ಬಳಕೆ:

ಈ ಉದ್ಯಾನದ ನಿರ್ಮಾಣಕ್ಕೆ ಆರಂಭಿಕವಾಗಿ ₹20 ಕೋಟಿ ಅನುದಾನ ಮಂಜೂರು ಮಾಡಿ,‌ ಡಿಪಿಆರ್ ಮತ್ತು ಆರಂಭಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು. ಜೊತೆಗೆ ಸಾಂಸ್ಥಿಕ ಕಂಪನಿಗಳು ಕೈಜೋಡಿಸಿ, ಸಿಎಸ್‌ಆರ್‌ ಅನುದಾನ ನೀಡಿದರೆ ಮೂರು ವರ್ಷದೊಳಗಾಗಿ ಉದ್ಯಾನ ಪೂರ್ಣಗೊಳಿಸಿ, ಇದೇ ಸರ್ಕಾರದ ಅವಧಿಯಲ್ಲಿ ಉದ್ಘಾಟಿಸುವುದು ತಮ್ಮ ಗುರಿಯಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.