ADVERTISEMENT

ತೇಜಸ್ವಿ ಪರ ಮತ ಯಾಚನೆ ವೇಳೆ ಮುಸ್ಲಿಂ ಧರ್ಮದ ಧ್ವಜ ತೆಗೆಯಿಸಿದ ಪಾಲಿಕೆ ಸದಸ್ಯ

‘ಭಾರತ್‌ ಮಾತಾಕಿ ಜೈ’ ಘೋಷಣೆ ಕೂಗುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 1:53 IST
Last Updated 17 ಏಪ್ರಿಲ್ 2019, 1:53 IST
   

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿಸೂರ್ಯ ಪರ ಮತ ಯಾಚಿಸಲು ಹೋಗಿದ್ದ ಬೊಮ್ಮನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ಸಿ.ಆರ್‌.ರಾಮಮೋಹನ್‌ ರಾಜು ಅವರು ಮುಸ್ಲಿಮರೊಬ್ಬರ ಮನೆ ಬಳಿ ಕಟ್ಟಿದ್ದ ಧರ್ಮದ ಧ್ವಜವನ್ನು (ಗೌಸ್‌–ಹೇ–ಪಾಕ್‌) ಬೆಳಿಗ್ಗೆ ಕಿತ್ತು ತೆಗೆದಿರುವುದು ವಿವಾದದ ಸ್ವರೂಪ ಪಡೆದಿದೆ.

ರಾಮಮೋಹನ್‌ ರಾಜು ಅವರು ಬೊಮ್ಮನಹಳ್ಳಿಯ ವಿರಾಟ್‌ನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸೋಮವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಕಟ್ಟಡದ ಮೊದಲ ಮಹಡಿಯಲ್ಲಿದ್ದ ಸಯ್ಯದ್‌ ಷರೀಫ್‌ ಅವರ ಮನೆಗೆ ಮತ ಯಾಚನೆಗೆ ಹೋಗಿದ್ದ ವೇಳೆ ಅರ್ಧಚಂದ್ರ ಮತ್ತು ನಕ್ಷತ್ರದ ಚಿಹ್ನೆಯನ್ನು ಹೊಂದಿದ್ದ ಹಸಿರು ಬಣ್ಣದ ಧ್ವಜ ಅವರ ಕಣ್ಣಿಗೆ ಬಿದ್ದಿತ್ತು. ಅದು ಪಾಕಿಸ್ತಾನದ ಧ್ವಜ ಎಂದು ತಪ್ಪಾಗಿ ಭಾವಿಸಿದ್ದ ಅವರು ಅದನ್ನು ಕಿತ್ತುಹಾಕಿದ್ದಾರೆ.

ಈ ವೇಳೆ ಸಯ್ಯದ್‌ ಅವರ ತಾಯಿ ಶಹಜಹಾನ್‌ ಬೇಗಂ ಅವರು ಮನೆಯಲ್ಲಿದ್ದರು. ರಾಮಮೋಹನ್‌ ರಾಜು ಜೊತೆಗಿದ್ದ ಬಿಜೆಪಿ ಕಾರ್ಯಕರ್ತರು, ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಾ ಶಹಜಹಾನ್‌ ಅವರನ್ನು ಹೊರಕ್ಕೆ ಕರೆದಿದ್ದಾರೆ. ‘ಈ ಧ್ವಜ ಇಲ್ಲಿರುವುದು ಇದು ಬೇಡ. ನೀವು ಹಸಿರು ಬಣ್ಣದ್ದನ್ನು ಹಾಕಿಕೊಳ್ಳಿ. ನಾನೇ ಕೊಡುತ್ತೇನೆ’ ಎಂದು ಪಾಲಿಕೆ ಸದಸ್ಯ ಹೇಳಿದ್ದಾರೆ. ಅದು ತಮ್ಮ ಧರ್ಮದ ಧ್ವಜ ಎಂದು ಮನವರಿಕೆ ಮಾಡಲೂ ಮಹಿಳೆ ಯತ್ನಿಸಿದರೂ ಅವರು ಕೇಳಿಲ್ಲ.

ADVERTISEMENT

ಘೋಷಣೆ ಕೂಗುವಂತೆ ಒತ್ತಾಯ: ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವಂತೆಯೂ ಮಹಿಳೆಯನ್ನು ಪಾಲಿಕೆ ಸದಸ್ಯ ಬಲವಂತ ಮಾಡಿದ್ದಾರೆ. ಮಹಿಳೆ ‘ಭಾರತ್‌ ಮಾತಾಕಿ ಜೈ’ ಎಂದು ಹೇಳಿದ ಬಳಿಕ ‘ವಂದೇ ಮಾತರಂ’ ಎಂದು ಘೋಷಣೆ ಕೂಗುತ್ತಾ ಧ್ವಜದೊಂದಿಗೆ ಹಿಂತಿರುಗಿದ್ದಾರೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಬಿಜೆಪಿ ಕಾರ್ಯಕರ್ತರು ವಿಡಿಯೊವನ್ನು ವಾಟ್ಸ್‌ ಆ್ಯಪ್‌ಗಳಲ್ಲಿ ಹಾಗೂ ಫೇಸ್‌ಬುಕ್‌ಗಳಲ್ಲಿ ಹರಿಯಬಿಟ್ಟಿದ್ದಾರೆ.

ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಮಮೋಹನ್‌ ರಾಜು, ‘ಅದು ಪಾಕಿಸ್ತಾನದ ಧ್ವಜ. ಹಾಗಾಗಿಯೇ ಅದನ್ನು ತೆಗೆಸಿದ್ದೇನೆ. ಅದು ಇಲ್ಲಿ ಏಕಿರಬೇಕು’ ಎಂದು ಪ್ರಶ್ನಿಸಿದರು.

ಧ್ವಜ ಹಿಂತಿರುಗಿಸಿದರು: ಈ ಘಟನೆ ಬಗ್ಗೆ ಶಹಜಹಾನ್‌ ಅವರು ಸ್ಥಳೀಯ ಮುಸ್ಲಿಂ ಮುಖಂಡರ ಗಮನಕ್ಕೆ ತಂದಿದ್ದಾರೆ. ಅವರು ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಎಚ್ಚೆತ್ತ ಬಿಜೆಪಿ ಕಾರ್ಯಕರ್ತರು ಮಂಗಳವಾರ ಧ್ವಜವನ್ನು ಮರಳಿಸಿದ್ದಾರೆ.

‘ಸಯ್ಯದ್‌ ಕುಟುಂಬದವರು ‘ಪೂರ್ಗಿ ಫಾದ್ಯ’ ಎಂಬ ಹಬ್ಬವನ್ನು ಶ್ರದ್ಧೆಯಿಂದ ಚರಿಸುತ್ತಾರೆ. ಈ ಸಲುವಾಗಿ ವ್ರತ ಆಚರಿಸುತ್ತಾರೆ. ಆ ದಿನಗಳಲ್ಲಿ ಮಧು ಮಾಂಸವನ್ನೂ ಸ್ವೀಕರಿಸುವುದಿಲ್ಲ. ಹಬ್ಬದ ವೇಳೆ ಭೇಟಿ ನೀಡುವ ಬಂಧುಗಳು ಮನೆಯನ್ನು ಗುರುತಿಸಲು ನೆರವಾಗಲಿ ಎಂಬ ಕಾರಣಕ್ಕೆ ಮನ ಬಳಿ ಧರ್ಮದ ಧ್ವಜ ಕಟ್ಟಿರುತ್ತಾರೆ. ಅದನ್ನು ಕಿತ್ತಿದ್ದಾರೆ. ಪಾಲಿಕೆ ಸದಸ್ಯರೇ ಧರ್ಮಕ್ಕೆ ಅವಮಾನ ಮಾಡುವುದು ಸರಿಯೇ’ ಎಂದು ಮುಸ್ಲಿಂ ಮುಖಂಡ ಸಯ್ಯದ್‌ ಸರ್ದಾರ್‌ ಪ್ರಶ್ನಿಸಿದರು.

‘ಅಮ್ಮನಿಂದ ಖಾಲಿ ಕಾಗದಕ್ಕೆ ಸಹಿ ಪಡೆದರು’

‘ನಾನಿಲ್ಲದ ವೇಳೆ ಮಂಗಳವಾರ ಬೆಳಿಗ್ಗೆ ಮನೆಗೆ ಬಂದ ಬಿಜೆಪಿಯ ಮುಖಂಡರು ನನ್ನ ಅಮ್ಮನನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಅವರಿಂದ ಖಾಲಿ ಹಾಳೆಗೆ ಸಹಿ ಪಡೆದಿದ್ದಾರೆ. ಬಳಿಕ ಕಾನ್‌ಸ್ಟೆಬಲ್‌ ಒಬ್ಬರು ರಾತ್ರಿ ವೇಳೆ ಮನೆಗೆ ಬಾಂಡ್‌ ಪೇಪರ್‌ ತಂದು ಅದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ನಾವು ಒಪ್ಪಿಲ್ಲ’ ಎಂದು ಶಹಜಹಾನ್‌ ಬೇಗಂ ಅವರ ಪುತ್ರ ಸಯ್ಯದ್‌ ಷರೀಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕರಣ ದಾಖಲಿಸುತ್ತೇವೆ’

‘ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದ ಈ ದೃಶ್ಯವನ್ನು ನಾನು ನೋಡಿದ್ದೇನೆ. ನಮ್ಮ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ, ಕೋಮು ವಿಚಾರವನ್ನು ಮುಂದಿಟ್ಟುಕೊಂಡು ಕುಟುಂಬದ ಮೇಲೆ ಒತ್ತಡ ಹೇರಿರುವುದು ಕಂಡು ಬಂದಿದೆ. ಹಾಗಾಗಿ ನಾವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ’ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಸ್‌.ಎಸ್‌.ನಕುಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆ ಸದಸ್ಯ ಕ್ಷಮೆ ಯಾಚಿಸಲಿ’

‘ನಮ್ಮ ಮನೆಯ ಮುಂದೆ ಪಾಕಿಸ್ತಾನದ ಧ್ವಜವನ್ನು ಕಟ್ಟಿದ್ದೇವೆ ಎಂದು ಆರೋಪಿಸಿ ನಮ್ಮ ಘನತೆಗೆ ಧಕ್ಕೆ ತಂದಿರುವ ಪಾಲಿಕೆ ಸದಸ್ಯ ರಾಮಮೋಹನ್‌ ರಾಜು ಅವರು ಕ್ಷಮೆ ಯಾಚಿಸಬೇಕು. ಆ ದೃಶ್ಯವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು’ ಎಂದು ಸಯ್ಯದ್‌ ಷರೀಫ್‌ ಒತ್ತಾಯಿಸಿದ್ದಾರೆ.

‘ನಾವು 22 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಪ್ರತಿ ವರ್ಷವೂ 3 ತಿಂಗಳು ಈ ಧ್ವಜ ಮನೆಯ ಮೇಲಿರುತ್ತದೆ. ಯಾವತ್ತೂ ವಿವಾದ ಉಂಟಾಗಿಲ್ಲ. ಪಾಲಿಕೆ ಸದಸ್ಯರಾದವರಿಗೆ ಅದು ಪಾಕಿಸ್ತಾನದ ಧ್ವಜ ಅಲ್ಲ ಎಂಬ ಜ್ಞಾನವೂ ಇಲ್ಲದಿರುವುದು ವಿಪರ್ಯಾಸ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.