ADVERTISEMENT

ವಿ.ವಿ ಆವರಣದಲ್ಲಿ ಬಿಜೆಪಿ ಫ್ಲೆಕ್ಸ್ ಹಾಕಿದ್ದು ಸರಿಯಲ್ಲ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 13:28 IST
Last Updated 14 ಜೂನ್ 2022, 13:28 IST
   

ಬೆಂಗಳೂರು: ಹೈಕೋರ್ಟ್ ಆದೇಶ ಉಲ್ಲಂಘಿಸಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಬಿಜೆಪಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಕಿದ್ದನ್ನು ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ‘ಬೆಂಗಳೂರು ವಿಶ್ವವಿದ್ಯಾಲಯ ಆವರಣ ಕೆಸರುಮಯವಾಗಿದೆ. ಸ್ಥಳೀಯ ಮಂತ್ರಿ ಇಲ್ಲಿನ ವಿದ್ಯಾರ್ಥಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಆದೇಶ ನೀಡಿದ್ದಾರೆ ಎಂಬ ವಿಚಾರ ತಿಳಿಯಿತು. ಈವರೆಗೂ ವಿಶ್ವವಿದ್ಯಾಲಯದ ಆವರಣವನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗಿದೆಯೇ ಹೊರತು ರಾಜಕೀಯ ಕಾರಣಗಳಿಗೆ ಬಳಸಿಲ್ಲ’ ಎಂದರು.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಲ್ಲಿನ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ನಾನು ಕೂಡ ಇಲ್ಲಿ ವಿದ್ಯಾರ್ಥಿ ನಾಯಕನಾಗಿ ಹಲವು ವರ್ಷಗಳ ಕಾಲ ಈ ವಿಶ್ವವಿದ್ಯಾಲಯದ ಜತೆ ಸಂಪರ್ಕ ಹೊಂದಿದ್ದೆ. ಇಲ್ಲಿ ಎಲ್ಲ ಪಕ್ಷದ ಹಲವು ನಾಯಕರು ತಯಾರಾಗಿದ್ದಾರೆ. ಈಗ ನಾಯಕರನ್ನು ಚಿವುಟಿ ಹಾಕುವ ಪ್ರಯತ್ನ ನಡೆಯುತ್ತಿದೆ’ ಎಂದು ದೂರಿದರು.

ADVERTISEMENT

‘ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿ ಅಸಭ್ಯವಾಗಿ ನಡೆದುಕೊಂಡಿರುವುದನ್ನೂ ಗಮನಿಸಿದ್ದೇನೆ. ಆ ಮೂಲಕ ಅಧಿಕಾರ ದುರ್ಬಳಕೆ ಆಗಿದೆ. ಇದೆಲ್ಲವನ್ನು ನೋಡಿಕೊಂಡು ಕೂಡಲು ಸಾಧ್ಯವಾಗಲಿಲ್ಲ. ಈ ವಿಚಾರ ತಿಳಿಯುತ್ತಿದ್ದಂತೆ ಇಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ನೋವು, ಸತ್ಯ ತಿಳಿಯಲು ಬಂದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.