ADVERTISEMENT

ಜಾತಿ ಗಣತಿ ವರದಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಹರಿಪ್ರಸಾದ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2023, 16:26 IST
Last Updated 16 ಅಕ್ಟೋಬರ್ 2023, 16:26 IST
<div class="paragraphs"><p>ಬಿ.ಕೆ. ಹರಿಪ್ರಸಾದ್‌</p></div>

ಬಿ.ಕೆ. ಹರಿಪ್ರಸಾದ್‌

   

ಬೆಂಗಳೂರು: ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನ ಗಣತಿ) ವರದಿಯನ್ನು ತ್ವರಿತವಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಅವರನ್ನು ಆಗ್ರಹಿಸಿದ್ದಾರೆ.

ಜಯಪ್ರಕಾಶ್‌ ಹೆಗ್ಡೆ ಅವರನ್ನು ಸೋಮವಾರ ಭೇಟಿಮಾಡಿದ ಅವರು, ಜಾತಿ ಜನ ಗಣತಿ ವರದಿ ಕುರಿತು ಚರ್ಚೆ ನಡೆಸಿದರು.

ADVERTISEMENT

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಹರಿಪ್ರಸಾದ್‌, ‘ಹಿಂದೆ ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಜಾತಿ ಜನ ಗಣತಿ ನಡೆಸಿತ್ತು. 2017ರಲ್ಲೇ ಸಮೀಕ್ಷೆ ಮುಗಿದು, ವರದಿ ಸಿದ್ಧವಾಗಿತ್ತು. ಆಗಲೇ ಸಲ್ಲಿಕೆಯಾಗಿದ್ದರೆ ಬಿಹಾರಕ್ಕಿಂತಲೂ ಮೊದಲು ನಮ್ಮ ರಾಜ್ಯವೇ ಜಾತಿ ಜನ ಗಣತಿಯ ವರದಿಯನ್ನು ಬಹಿರಂಗಪಡಿಸುವ ಅವಕಾಶ ಇತ್ತು’ ಎಂದರು.

‘₹ 158 ಕೋಟಿ ವೆಚ್ಚ ಮಾಡಿ ಗಣತಿ ನಡೆಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ವರದಿ ಸಲ್ಲಿಕೆಯಾಗಿಲ್ಲ ಎಂಬ ಮಾಹಿತಿ ಇದೆ. ಈಗ ಕಾಂತರಾಜ ಅವರ ಬದಲಿಗೆ ಜಯಪ್ರಕಾಶ್‌ ಹೆಗ್ಡೆ ಆಯೋಗದ ಅಧ್ಯಕ್ಷರಾಗಿದ್ದಾರೆ. ಹೆಸರು ಮುಖ್ಯವಲ್ಲ, ವರದಿ ಮುಖ್ಯ. ಆದ್ದರಿಂದ ಆದಷ್ಟು ಬೇಗ ವರದಿ ಸಲ್ಲಿಸಿ ಎಂದು ಹೆಗ್ಡೆ ಅವರಲ್ಲಿ ಆಗ್ರಹಿಸಿದ್ದೇನೆ’ ಎಂದು ತಿಳಿಸಿದರು.

ರಾಜ್ಯದ ಆರು ಕೋಟಿ ಜನರ ಭವಿಷ್ಯದ ವಿಚಾರ ಈ ವರದಿಯಲ್ಲಿದೆ. ವರದಿಯಲ್ಲಿ ಲೋಪಗಳಿವೆ ಎಂಬ ಕಾರಣವೊಡ್ಡಿ ಅದನ್ನು ಸಲ್ಲಿಸಲು ವಿರೋಧಿಸುವುದು ಸರಿಯಲ್ಲ. ಲೋಪಗಳಿದ್ದರೂ ಬಹಿರಂಗಪಡಿಸಿದ ಬಳಿಕ ಸರಿಪಡಿಸಲು ಅವಕಾಶಗಳಿವೆ. ಎಲ್ಲ ಸಂದರ್ಭಗಳಲ್ಲೂ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಮೇಲು ಜಾತಿಗಳವರು ವಿರೋಧಿಸಿದ ಉದಾಹರಣೆಗಳಿವೆ. ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಜಾತಿ ಜನ ಗಣತಿ ವರದಿ ಕೇವಲ ಮೀಸಲಾತಿ ನಿಗದಿಗೆ ಬಳಕೆ ಆಗುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿದರೆ ಒಳ್ಳೆಯದು. ಈಗ ಅಭಿವೃದ್ಧಿ ಯೋಜನೆಗಳಲ್ಲಿ ವಿವಿಧ ಸಮುದಾಯಗಳಿಗೆ ನ್ಯಾಯ ಒದಗಿಸಲು ಈ ವರದಿ ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.