ADVERTISEMENT

ವೈದ್ಯರೊಬ್ಬರಲ್ಲಿ ಎರಡು ವಿಧದ ಶಿಲೀಂಧ್ರ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 4:49 IST
Last Updated 26 ಜೂನ್ 2021, 4:49 IST

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡಿದ್ದ ನಗರದ ವೈದ್ಯರೊಬ್ಬರಿಗೆ ಕಪ್ಪು ಹಾಗೂ ಹಸಿರು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದೆ.

ಈ ಎರಡು ವಿಧದ ಶಿಲೀಂಧ್ರ ಸೋಂಕು ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡ ದೇಶದ ಮೊದಲ ಪ್ರಕರಣ ಇದು ಎಂದು ಹೇಳಲಾಗಿದೆ. ಡಾ. ಕಾರ್ತಿಕೇಯನ್ ಆರ್‌. ಎಂಬುವವರು ಕಪ್ಪು ಮತ್ತು ಹಸಿರು ಶಿಲೀಂಧ್ರ ಸೋಂಕಿಗೆ ಒಳಗಾದವರಾಗಿದ್ದಾರೆ. ‌ಅವರಿಗೆಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಕಳೆದ ಎಪ್ರಿಲ್‌ನಲ್ಲಿ ಕೋವಿಡ್‌ ಪೀಡಿತರಾಗಿದ್ದ ಅವರು, ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಮುಖದ ಭಾಗದಲ್ಲಿ ಮರಗಟ್ಟುವಿಕೆ, ನೋವು, ಮೂಗು ಸೋರುವಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಅವರಿಗೆ ಕಾಣಿಸಿಕೊಂಡಿದ್ದವು. ತಪಾಸಣೆ ನಡೆಸಿದ ವೈದ್ಯರು, ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಮೂಲಕ ಸೋಂಕನ್ನು ಪತ್ತೆ ಮಾಡಿದ್ದಾರೆ.

ADVERTISEMENT

‘ಅವರ ಮೂಗಿನಲ್ಲಿ ಹಸಿರು ಮಿಶ್ರಿತ ಕಂದು ಬಣ್ಣದ ಉಪ್ಪಿನ ಹರಳು ಮಾದರಿಯ ವಸ್ತುಗಳು ಗೋಚರಿಸಿದವು. ಇದು ಸಾಮಾನ್ಯ ಕಪ್ಪು ಶಿಲೀಂಧ್ರ ಪ್ರಕರಣದಂತೆ ಕಾಣಲಿಲ್ಲ. ಹೆಚ್ಚಿನ ವಿಶ್ಲೇಷಣೆ ನಡೆಸಿದಾಗ ಎರಡು ಮಾದರಿಯ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿತು. ಹೀಗಾಗಿ, ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸಿ, ಸೋಂಕು ನಿವಾರಕ ಔಷಧವನ್ನು ನೀಡಲಾಗಿದೆ’ ಎಂದು ಆಸ್ಪತ್ರೆಯ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ಪ್ರಶಾಂತ್ ಆರ್‌. ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.