ADVERTISEMENT

ಮೂಲೆ ಸೇರಿದ ಬಿಎಂಟಿಸಿ ವೋಲ್ವೊ ಬಸ್‌

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 20:42 IST
Last Updated 5 ಆಗಸ್ಟ್ 2021, 20:42 IST
ಬಿಎಂಟಿಸಿ ವೋಲ್ವೊ ಬಸ್
ಬಿಎಂಟಿಸಿ ವೋಲ್ವೊ ಬಸ್   

ಬೆಂಗಳೂರು:ಸಿಲಿಕಾನ್ ಸಿಟಿಯಾಗಿ ಬದಲಾಗುತ್ತಿರುವ ಬೆಂಗಳೂರಿನಲ್ಲಿ ಜನರಿಗೆ ಹವಾನಿಯಂತ್ರಿತ ಸಾರಿಗೆ ಸೇವೆ ಒದಗಿಸಲು ಖರೀದಿಸಿದ ವೋಲ್ವೊ ಬಸ್‌ಗಳು ಬಿಎಂಟಿಸಿಗೆ ಬಿಳಿಯಾನೆಯಾಗಿ ಪರಿಣಮಿಸಿವೆ. ಅವುಗಳು ಕೋವಿಡ್ ಬಳಿಕ ಮೂಲೆ ಸೇರಿ ಡಿಪೋಗಳಲ್ಲೇ ನಿಂತಿವೆ.

ಈ ಬಸ್‌ಗಳು ಪ್ರತಿ ಕಿಲೋ ಮೀಟರ್‌ ಸಂಚಾರಕ್ಕೆ ₹80ರಿಂದ ₹85 ಖರ್ಚಾಗುತ್ತಿದ್ದರೆ, ಕೋವಿಡ್ ಸಂದರ್ಭದಲ್ಲಿ ಪ್ರತಿ ಕಿಲೋ ಮೀಟರ್‌ಗೆ ವರಮಾನದ ಪ್ರಮಾಣ ₹50ಕ್ಕೆ ಇಳಿಕೆಯಾಗಿದೆ. ಒಟ್ಟು 860 ವೋಲ್ವೊ ಬಸ್‌ಗಳು ನಿಗಮದಲ್ಲಿವೆ. ಜೂನ್ 21ರಿಂದ ಬಸ್‌ಗಳು ಸಂಚಾರವನ್ನು ಪುನರ್ ಆರಂಭಿಸಿದ್ದರೂ, ಕೇವಲ 60 ಬಸ್‌ಗಳನ್ನು ಬಿಎಂಟಿಸಿಯು ರಸ್ತೆಗೆ ಇಳಿಸಿದೆ.

ಹೆಚ್ಚಿನ ಖಾಸಗಿ ಕಂಪನಿಗಳು ಮನೆಯಿಂದ ಕೆಲಸ ಮಾಡುವ ಪದ್ಧತಿ ಅಳವಡಿಸಿಕೊಂಡಿದ್ದು, ಬಸ್‌ ಸಂಚಾರ ಮಾಡಿದರೂ ಪ್ರಯಾಣಿಕರು ಇಲ್ಲವಾಗಿದ್ದಾರೆ.ಏರಿಕೆಯಾಗುತ್ತಿರುವ ಡೀಸೆಲ್‌ ಬೆಲೆ ನಡುವೆ ಬಸ್‌ಗಳ ಸಂಚಾರ ಆರಂಭಿಸಲು ಸಮರ್ಥ ಆಯ್ಕೆ ಕಾಣಿಸುತ್ತಿಲ್ಲ. ಆದರೂ, ಪ್ರತಿ ಬಸ್‌ಗೆ ವರ್ಷಕ್ಕೆ ₹1 ಲಕ್ಷ ನಿರ್ವಹಣಾ ವೆಚ್ಚ ಬರಲಿದೆ. ಕೆಲ ತಿಂಗಳ ಕಾಲ ನಿಲ್ಲಿಸಿ ಮತ್ತೆ ಕಾರ್ಯಾಚರಣೆ ಆರಂಭಿಸಬೇಕು ಎಂದರೂ ಹೆಚ್ಚುವರಿ ವೆಚ್ಚ ಬರಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ಬಸ್‌ಗಳನ್ನು ಹವಾನಿಯಂತ್ರಿತ ರಹಿತವನ್ನಾಗಿಸುವುದು ಮತ್ತು ಬೇರೆ ನಿಗಮಗಳಿಗೆ ನೀಡುವುದಷ್ಟೇ ಈ ಹೊರೆಯಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗ. ವಿಮಾನ ನಿಲ್ದಾಣಕ್ಕೆ ಹೊರತುಪಡಿಸಿ ಬೇರೆ ಮಾರ್ಗದಲ್ಲಿ ಈ ಬಸ್‌ಗಳ ಕಾರ್ಯಾಚರಣೆ ಆರಂಭಿಸದೇ ಇರುವುದೇ ಸೂಕ್ತ ಎಂದು ಪರಿಗಣಿಸಲಾಗಿದೆ ಎಂದು ಹೇಳಿದರು.

2014–15ರಲ್ಲಿ ವೋಲ್ವೊ ಬಸ್‌ಗಳನ್ನು ಬಿಎಂಟಿಸಿ ರಸ್ತೆಗೆ ಇಳಿಸಿದೆ. ಆರಂಭದಲ್ಲಿ ಐ.ಟಿ ಉದ್ಯೋಗಿಗಳು ಈ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಓಲಾ, ಉಬರ್ ರೀತಿಯ ಕಂಪನಿಗಳು ಕಡಿಮೆ ದರದಲ್ಲಿ ಟ್ಯಾಕ್ಸಿ ಸೇವೆ ಒದಗಿಸಿದ ಬಳಿಕ ಈ ಬಸ್ ಹತ್ತುವ ಜನರ ಸಂಖ್ಯೆ ಇಳಿಕೆ ಆಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.