ADVERTISEMENT

ಮೆಟ್ರೊ ಕಾರ್ಮಿಕರಿಗೆ ಕೊರೊನಾ ಸೋಂಕು: ಹೈಕೋರ್ಟ್‌ ಅಸಮಾಧಾನ

ಶಿಬಿರಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಿರುವ ಬಗ್ಗೆ ವರದಿ ಕೇಳಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 5:35 IST
Last Updated 21 ಜುಲೈ 2020, 5:35 IST
ಮೆಟ್ರೊ ರೈಲು ಮಾರ್ಗದ ಕಾಮಗಾರಿ ನಿರ್ವಹಿಸುತ್ತಿರುವ ಕಾರ್ಮಿಕರು 
ಮೆಟ್ರೊ ರೈಲು ಮಾರ್ಗದ ಕಾಮಗಾರಿ ನಿರ್ವಹಿಸುತ್ತಿರುವ ಕಾರ್ಮಿಕರು    

ಬೆಂಗಳೂರು: ಮೆಟ್ರೊ ರೈಲು ಮಾರ್ಗ ಕಾಮಗಾರಿ ನಿರ್ವಹಿಸುತ್ತಿರುವ ಕಾರ್ಮಿಕರ ಶಿಬಿರಗಳಲ್ಲಿ ಆರೋಗ್ಯ ಕೋವಿಡ್ ಪರೀಕ್ಷೆ ನಡೆಸಿರುವ ಬಗ್ಗೆ ವರದಿ ನೀಡುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕೋವಿಡ್‌ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ಒಂದೇ ಶಿಬಿರದಲ್ಲಿ ಸಾಕಷ್ಟು ಜನರಲ್ಲಿ ಸೋಂಕು ಪತ್ತೆಯಾಗಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿತು.

‘ಕಾರ್ಮಿಕರ ಒಂದು ಶಿಬಿರದಲ್ಲಿ 211 ಜನರಿದ್ದಾರೆ. ಅವರಲ್ಲಿ 87 ಜನರಿಗೆ ಸೋಂಕು ದೃಢಪಟ್ಟಿದೆ’ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.

ADVERTISEMENT

‘ಶಿಬಿರದಲ್ಲಿ ಉಳಿದ ಕಾರ್ಮಿಕರ ಸುರಕ್ಷೆಗೆ ಏನು ಕ್ರಮ ಕೈಗೊಳ್ಳಲಾಗಿದೆ, ಎಷ್ಟು ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂಬ ಲಿಖಿತ ವಿವರಣೆಯನ್ನು ಜುಲೈ 23ರೊಳಗೆ ಸಲ್ಲಿಸಬೇಕು. ಸೋಂಕು ಹರಡುವ ಕೇಂದ್ರಗಳಾಗದಂತೆ ತಡೆಯುವುದು ಬಿಎಂಆರ್‌ಸಿಎಲ್ ಜವಾಬ್ದಾರಿ’ ಎಂದು ಪೀಠ ತಿಳಿಸಿತು.

‘ಪೌರ ಕಾರ್ಮಿಕರಿಗೂ ಪಿಪಿಇ ಕಿಟ್ ಕೊಡಿ’

ಬಿಬಿಎಂಪಿ ವ್ಯಾಪ್ತಿಯ ‌ಪೌರ ಕಾರ್ಮಿಕರಿಗೆ ಕೂಡಲೇ ಪಿಪಿಇ ಕಿಟ್ ನೀಡಬೇಕು ಎಂದು ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು.

ಒಂದು ವಾರ್ಡ್‌ನಲ್ಲಿ 99 ಪೌರ ಕಾರ್ಮಿಕರಿಗೆ ನಡೆಸಿದ ಪರೀಕ್ಷೆಯಲ್ಲಿ 23 ಜನರಲ್ಲಿ ಸೋಂಕಿರುವುದು ದೃಢಪಟ್ಟಿದೆ. ಸುರಕ್ಷತಾ ಸಲಕರಣೆಗಳನ್ನು ಪೌರ ಕಾರ್ಮಿಕ ಒದಗಿಸಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಮತ್ತು ಸಹಾಯಕ ಸಿಬ್ಬಂದಿಗೂ ಪಿಪಿಇ ಕಿಟ್ ವಿತರಿಸಲಾಗಿದೆಯೇ ಎಂಬುದರ ಬಗ್ಗೆಯೂ ಗಮನ ಹರಿಸಬೇಕು’ ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.