ADVERTISEMENT

ಮೆಟ್ರೊ ಯೋಜನೆ: ತಜ್ಞ ಸಂಸ್ಥೆ ನೇಮಿಸಲು ಸಿದ್ಧ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 20:05 IST
Last Updated 24 ಮಾರ್ಚ್ 2021, 20:05 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮೆಟ್ರೊ ಮೊದಲ ಮತ್ತು ಎರಡನೇ ಹಂತದ ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರ ವಿಧಿಸಿರುವ ಷರತ್ತು ಪಾಲನೆಯಾಗಿರುವುದನ್ನು ಖಚಿತಪಡಿಸಲು ತಜ್ಞ ಸಂಸ್ಥೆಯನ್ನು ನೇಮಕ ಮಾಡಲು ಸಮ್ಮತಿ ಇದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್‌) ತಿಳಿಸಿವೆ.

‘ತರ್ಕಬದ್ಧ ಸಮಗ್ರ ಸಂಚಾರ ಯೋಜನೆ’ (ಐಟಿಆರ್‌ಪಿ) ಹಾಗೂ ‘ಸಮಗ್ರ ಸಂಚಾರ ಯೋಜನೆ’ (ಸಿಎಂಪಿ) ಷರತ್ತು ಪಾಲನೆ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಜ್ಞ ಏಜೆನ್ಸಿಯಿಂದ ಪರಿಶೀಲನೆ ನಡೆಸಲು ಸರ್ಕಾರ ಸಿದ್ಧವಿದೆಯೇ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಪ್ರಶ್ನೆ ಮಾಡಿತ್ತು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸೆಂಟರ್ ಫಾರ್ ಇನ್ಫ್ರಾಸ್ಟ್ರಕ್ಚರ್, ಸಸ್ಟೈನಬಲ್ ಟ್ರಾನ್ಸ್‌ಪೋರ್ಟ್ ಮತ್ತು ಅರ್ಬನ್ ಪ್ಲಾನಿಂಗ್ (ಸಿಸ್ಟುಪ್‌) ಅಥವಾ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಅನ್ನು ಈ ಕೆಲಸಕ್ಕೆ ಪರಿಗಣಿಸಬಹುದು ಎಂದು ಪತ್ರದಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರ ಸಮಯ ಕೋರಿರುವ ಕಾರಣ ವಿಚಾರಣೆಯನ್ನು ಏ.1ಕ್ಕೆ ಮುಂದೂಡಲಾಯಿತು.

ADVERTISEMENT

ದೊಮ್ಮಲೂರು ನಿವಾಸಿ ಡಿ.ಟಿ. ದೇವರೆ ಹಾಗೂ ‘ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್’ನವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಷರತ್ತುಗಳು ಪಾಲನೆ ಆಗಿಲ್ಲ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.