ADVERTISEMENT

ತರಾತುರಿಯಲ್ಲಿ ಗುಂಡಿ ಮುಚ್ಚಿದ ಬಿಎಂಆರ್‌ಸಿಎಲ್

ಕೆಂಗೇರಿ: ಬಸ್‌ ಅಪಘಾತಕ್ಕೆ ರಸ್ತೆ ಗುಂಡಿ ಕಾರಣ l ಗುಂಡಿಯೊಳಗೆ ಬೀಳುತ್ತಿರುವ ದ್ವಿಚಕ್ರ ವಾಹನ ಸವಾರರು

​ಪ್ರಜಾವಾಣಿ ವಾರ್ತೆ
Published 10 ಮೇ 2022, 20:58 IST
Last Updated 10 ಮೇ 2022, 20:58 IST
   

ಬೆಂಗಳೂರು: ಮೈಸೂರು ರಸ್ತೆಯಲ್ಲಿನ ಮೆಟ್ರೊ ರೈಲು ಮಾರ್ಗದ ಕಾಂಕ್ರೀಟ್‌ ಕಂಬಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಗುದ್ದಿ ಸೋಮವಾರ ಬೆಳಗ್ಗಿನ ಜಾವ ಅವಘಡ ಸಂಭವಿಸಿದ ಬಳಿಕ ಎಚ್ಚೆತ್ತಿರುವ ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ (ಬಿಎಂಆರ್‌ಸಿಎಲ್‌), ಅಪಾಯವನ್ನು ಆಹ್ವಾನಿಸುವಂತಿದ್ದ ಗುಂಡಿಗಳನ್ನು ‌ರಾತ್ರೋರಾತ್ರಿ ಮುಚ್ಚಿದೆ.

ಮೆಟ್ರೊ ಪಿಲ್ಲರ್ ಸಂಖ್ಯೆ 546ರ ಬಳಿ ಭಾರಿ ಗಾತ್ರದ ಗುಂಡಿಯು ರಸ್ತೆಯಲ್ಲಿತ್ತು. ವೇಗವಾಗಿ ಬಂದ ಬಸ್ ಗುಂಡಿಯಿಂದ ಜಿಗಿದು ಚಾಲಕನ ನಿಯಂತ್ರಣ ತಪ್ಪಿ ಮೆಟ್ರೊ ರೈಲು ಮಾರ್ಗದ ಕಾಂಕ್ರಿಟ್‌ ಕಂಬಕ್ಕೆ (ಸಂಖ್ಯೆ 545) ಡಿಕ್ಕಿ ಹೊಡೆದಿತ್ತು.

‘ಮೈಸೂರು ಕಡೆಯಿಂದ ವೇಗವಾಗಿ ಬರುವ ವಾಹನಗಳು ಈ ಗುಂಡಿಗೆ ಇಳಿದು ಪ್ರತಿನಿತ್ಯ ಅಪಘಾತ ಸಂಭವಿಸುತ್ತಿದ್ದವು. ದ್ವಿಚಕ್ರ ವಾಹನ ಸವಾರರು ಗುಂಡಿಯೊಳಗೆ ಬಿದ್ದು ಎದ್ದು ಹೋಗುವುದು ಸಾಮಾನ್ಯವಾಗಿತ್ತು. ಕಳೆದ ವಾರವಷ್ಟೇ ವೃದ್ಧ ದಂಪತಿ ಗುಂಡಿಯೊಳಗೆ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು’ ಎಂದು ಸ್ಥಳೀಯರು ದೂರುತ್ತಾರೆ.

ADVERTISEMENT

‘ಗುಂಡಿ ಇರುವುದನ್ನು ಗಮನಿಸಿ ಬ್ರೇಕ್‌ ಒತ್ತಿ ವಾಹನ ನಿಲ್ಲಿಸಲು ಚಾಲಕರು ಪ್ರಯತ್ನಿಸುತ್ತಾರೆ. ಆಗ ಹಿಂದಿನಿಂದ ವೇಗ
ವಾಗಿ ಬರುವ ವಾಹನಗಳು ಡಿಕ್ಕಿ ಹೊಡೆದು ಸರಣಿ ಅಪಘಾತಗಳ ತಾಣವಾಗಿಯೇ ಮಾರ್ಪಟ್ಟಿತ್ತು. ರಸ್ತೆ ನಿರ್ವಹಣೆ ಮಾಡದೆ ಇರುವುದರಿಂದ ಅಮಾಯಕರು ತೊಂದರೆ ಅನುಭವಿಸುವಂತಾಗಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ ಅಪಘಾತಕ್ಕೀಡಾದ ಬಳಿಕ ಬಿಎಂಆರ್‌ಸಿಎಲ್ ರಾತ್ರೋರಾತ್ರಿ ಗುಂಡಿ ಮುಚ್ಚಿದೆ. ಈ ಕೆಲಸವನ್ನು ಮೊದಲೇ ಮಾಡಿದ್ದರೆ ಅಪಘಾತ ತಪ್ಪಿಸಬಹುದಿತ್ತು ಎಂದು ಕೆಂಗೇರಿಯ ಶಂಕರ್ ಹೇಳಿದರು.

ಮೆಟ್ರೊ ಪಿಲ್ಲರ್ ನಿರ್ಮಾಣ ಮಾಡುವಾಗ ತೆಗೆದಿದ್ದ ಹೊಂಡಗಳನ್ನು ಸರಿಯಾಗಿ ಮುಚ್ಚಿರಲಿಲ್ಲ. ಪಿಲ್ಲರ್‌ ಸುತ್ತಲೂ ಮಣ್ಣು ಕುಸಿದು ಅವು ಗುಂಡಿಯ ರೂಪ‍ ಪಡೆದುಕೊಂಡಿವೆ. ನಾಯಂಡಹಳ್ಳಿಯಿಂದ ಕೆಂಗೇರಿ ತನಕ ರಸ್ತೆಯ ಎರಡೂ ಬದಿಯಲ್ಲೂ ಇಂತಹದ್ದೇ ಸ್ಥಿತಿ ಇದೆ. ವಾಹನ ಚಾಲಕರು ಈ ಗುಂಡಿಗಳನ್ನು ತಪ್ಪಿಸಲು ಪ್ರಯತ್ನಿಸಿದಾಗ ಅಪಘಾತಗಳು ಸಂಭವಿಸುತ್ತಿವೆ.

ಮೈಸೂರು ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ ನೀಡುವ ಗುಂಡಿಗಳು ಈಗಲೂ ಸಾಕಷ್ಟಿವೆ. ಮೆಟ್ರೊ ಪಿಲ್ಲರ್ ಸಂಖ್ಯೆ 510ರ ಬಳಿ ದೊಡ್ಡ ಗುಂಡಿಯೊಂದು ಬಾಯ್ದೆರೆದುಕೊಂಡಿದೆ. ಇದು ಮತ್ತೊಂದು ಅಪಫಾತಕ್ಕೆ ಕಾರಣವಾಗುವ ಸಾಧ್ಯತೆ ಇದೆ.

‘ನ್ಯೂನತೆ ಇರುವುದರಿಂದ ಹಸ್ತಾಂತರ ಮಾಡಿಕೊಂಡಿಲ್ಲ’

‘ಮೆಟ್ರೊ ರೈಲು ಮಾರ್ಗದ ಕಾಮಗಾರಿ ನಿರ್ವಹಿಸಲು ರಸ್ತೆಯನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಾಗಿದ್ದು, ನ್ಯೂನತೆಗಳಿರುವುದರಿಂದಕಾಮಗಾರಿ ಪೂರ್ಣಗೊಂಡಿದ್ದರೂ ಮರು ಹಸ್ತಾಂತರ ಮಾಡಿಕೊಂಡಿಲ್ಲ’ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. ‘ಹಸ್ತಾಂತರ ಮಾಡಿಕೊಳ್ಳುವಂತೆ 2021ರ ಸೆಪ್ಟೆಂಬರ್‌ನಲ್ಲಿ ಬಿಎಂಆರ್‌ಸಿಎಲ್ ಪತ್ರ ಬರೆದಿತ್ತು. ಆದರೆ, ನ್ಯೂನತೆಗಳನ್ನು ಸರಿಪಡಿಸಿದ ನಂತರ ಜಂಟಿ ಪರಿಶೀಲನೆ ನಡೆಸಿ ಹಸ್ತಾಂತರಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದೆವು’ ಎಂದು ಬಿಬಿಎಂಪಿ ವಿಶೇಷ ಆಯುಕ್ತರು (ಯೋಜನೆ) ವಿವರಿಸಿದ್ದಾರೆ.

‘ರಸ್ತೆಗೆ ಡಾಂಬರ್‌ ಹಾಕುವ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಬಿಡುವು ನೀಡಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಮಗಾರಿ ಆರಂಭಿಸಿದ ಕೂಡಲೇ ಮಳೆ ಆರಂಭವಾಗಿದ್ದರೆ ಕಾಮಗಾರಿ ನಿಲ್ಲಿಸಿದ್ದೇವೆ. ಅಪಘಾತ ಸಂಭವಿಸಿದ ಜಾಗದ ಸುತ್ತಮುತ್ತ ಇರುವ ಗುಂಡಿಗಳನ್ನು ಈಗ ಮುಚ್ಚಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.