ADVERTISEMENT

ನಮ್ಮ ಮೆಟ್ರೊ ‌| ಹೆಚ್ಚಿದ ಪ್ರಯಾಣಿಕರು –ಹೆಚ್ಚದ ಸೌಕರ್ಯ

ಹಲವು ನಿಲ್ದಾಣಗಳಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಎಸ್ಕಲೇಟರ್‌ ಅಳವಡಿಕೆ

ಗುರು ಪಿ.ಎಸ್‌
Published 8 ಜುಲೈ 2019, 19:53 IST
Last Updated 8 ಜುಲೈ 2019, 19:53 IST
ಜಯನಗರ ಮೆಟ್ರೊ ನಿಲ್ದಾಣದಲ್ಲಿ ಎಸ್ಕಲೇಟರ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ
ಜಯನಗರ ಮೆಟ್ರೊ ನಿಲ್ದಾಣದಲ್ಲಿ ಎಸ್ಕಲೇಟರ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ   

ಬೆಂಗಳೂರು: ನಗರದಲ್ಲಿ ‘ನಮ್ಮ ಮೆಟ್ರೊ’ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಅದಕ್ಕೆ ಪೂರಕವಾಗಿ ಸೇವೆ–ಸೌಲಭ್ಯಗಳನ್ನು ಹೆಚ್ಚಿಸಲುಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗುತ್ತಿಲ್ಲ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.

‘ಸುಖಕರ ಪ್ರಯಾಣಕ್ಕೆ ಅಗತ್ಯವಾದ ಸೌಲಭ್ಯ ಕಲ್ಪಿಸುವುದು, ಪ್ರಯಾಣಿಕರ ಸಮಸ್ಯೆ ಪರಿಹರಿಸುವುದು ನಿಗಮಕ್ಕೆ ಆದ್ಯತೆಯ ವಿಷಯವಾಗಿಲ್ಲ’ ಎಂದು ಮೆಟ್ರೊ ಪ್ರಯಾಣಿಕ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಎ. ಭಾನು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಜೆ.ಪಿ. ನಗರ, ಜಯನಗರ ಮತ್ತು ನ್ಯಾಷನಲ್‌ ಕಾಲೇಜು ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಮೆಟ್ಟಿಲುಗಳಿರುವ ಕಡೆ ಹೆಚ್ಚುವರಿ ಎಸ್ಕಲೇಟರ್‌ ಅಳವಡಿಕೆ ವಿಳಂಬವಾಗುತ್ತಿದೆ. ಮೂರು ವರ್ಷಗಳಿಂದ ಈ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದರೂ, ಎಲ್ಲ ಮೆಟ್ಟಿಲುಗಳ ಬಳಿ ಎಸ್ಕಲೇಟರ್‌ ಸೌಲಭ್ಯ ಒದಗಿಸಿಲ್ಲ’ ಎಂದು ಅವರು ದೂರುತ್ತಾರೆ.

ADVERTISEMENT

‘ಬೆಳಿಗ್ಗೆ 8.30ರಿಂದ 10.30ರ ನಡುವೆ ಮೆಟ್ರೊ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚು ಇರುತ್ತದೆ. ಕಚೇರಿಗೆ ತಲುಪುವ ಅವಸರದಲ್ಲಿ ಪ್ರಯಾ ಣಿಕರು ಇರುತ್ತಾರೆ. ಸಂಜೆ 4 ಗಂಟೆ ಬಳಿಕವೂ ದಟ್ಟಣೆ ವಿಪರೀತ ಇರುತ್ತದೆ. ಆಗ ಜನ ಮನೆ ಸೇರುವ ತರಾತುರಿಯಲ್ಲಿ ರುತ್ತಾರೆ. ಇಂತಹ ಸಂದರ್ಭಗಳಲ್ಲಿ ಮೆಟ್ಟಿಲು ಬಳಸಲು ತೊಂದರೆಯಾಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ಜಾಲಹಳ್ಳಿ, ಪೀಣ್ಯದಂತಹ ಪ್ರಮುಖ ನಿಲ್ದಾಣಗಳಲ್ಲಿ ಟೋಕನ್‌ ಹಾಕಿದಾಗ ತೆರೆದುಕೊಳ್ಳುವ ಗೇಟ್‌ಗಳು ಹದಗೆಟ್ಟಿವೆ. ಇವುಗಳನ್ನು ದುರಸ್ತಿ ಮಾಡುತ್ತಿಲ್ಲ. ಇಲ್ಲಿರುವ ಐದಾರು ಗೇಟ್‌ಗಳಲ್ಲಿ ಒಂದೆರಡು ಮಾತ್ರ ಕಾರ್ಯಾಚರಿಸುತ್ತವೆ. ಪ್ರಯಾಣಿಕರು ಇಲ್ಲಿ ಸರದಿಯಲ್ಲಿ ಕಾಯಬೇಕಾದ ಸ್ಥಿತಿಯಿದೆ’ ಎಂದು ಅವರು ತಿಳಿಸಿದರು.

ಕೆಲವು ನಿಲ್ದಾಣಗಳಲ್ಲಿ ಅಳವಡಿಸಿರುವ ಎಸ್ಕಲೇಟರ್‌ಗಳನ್ನೂ ಪ್ರಯಾಣಿಕರ ಬಳಕೆಗೆ ಒದಗಿಸಿಲ್ಲ. ಕೆ.ಆರ್‌.ಮಾರುಕಟ್ಟೆ ನಿಲ್ದಾಣದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕಡೆಗಿನ ಪ್ರವೇಶದ್ವಾರವನ್ನು ಇನ್ನೂ ಜನರ ಬಳಕೆಗೆ ನೀಡಿಲ್ಲ.

ಶೀಘ್ರ ಅಳವಡಿಕೆ:‘ಈ ಮೊದಲು ಇದ್ದ ಎಸ್ಕಲೇಟರ್‌ಗಳೆಲ್ಲವೂ ಈಗಲೂ ಕಾರ್ಯನಿರ್ವಹಿಸುತ್ತಿವೆ.ಜಯನಗರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಹೆಚ್ಚುವರಿಯಾಗಿ ಎಸ್ಕಲೇಟರ್‌ಗಳನ್ನು ಅಳವಡಿಸಲಾಗುತ್ತಿದೆ. ತಾಂತ್ರಿಕವಾಗಿ ಎಲ್ಲ ತಪಾಸಣೆಗಳನ್ನು ಪೂರ್ಣಗೊಳಿಸಿದ ನಂತರ ಇವುಗಳನ್ನು ಸಾರ್ವಜನಿಕರ ಬಳಕೆಗೆ ಒದಗಿಸುತ್ತೇವೆ.

ಜನರ ಭದ್ರತೆಯ ದೃಷ್ಟಿಯಿಂದ ಕೆಲವು ಕಡೆ ಪ್ರವೇಶ ನಿರ್ಬಂಧಿಸಬೇಕಾಗುತ್ತದೆ’ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶವಂತ ಚೌಹಾಣ್‌ ತಿಳಿಸಿದರು.

‘ಪೀಣ್ಯ, ದಾಸರಹಳ್ಳಿ ನಿಲ್ದಾಣಗಳಲ್ಲಿ ಸ್ವಯಂಚಾಲಿತ ಟೋಕನ್‌ ಗೇಟ್‌ಗಳು ಇವೆ. ಎಲ್ಲ ಗೇಟ್‌ಗಳನ್ನು ತೆರೆದಾಗ, ಕೆಲವೊಮ್ಮೆ ತಾಂತ್ರಿಕ ಸಮಸ್ಯೆಯಾಗಿದೆ. ಹಾಗಾಗಿ ಒಂದೆರಡನ್ನು ಮುಚ್ಚಿ, ಉಳಿದವುಗಳನ್ನು ತೆರೆಯಲಾಗುತ್ತಿದೆ. ಕೆಟ್ಟು ಹೋಗಿರುವ ಗೇಟ್‌ಗಳನ್ನು ತ್ವರಿತವಾಗಿ ದುರಸ್ತಿ ಮಾಡಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಪ್ರಯಾಣಿಕರ ಸಂಖ್ಯೆ ಅತಿ ಹೆಚ್ಚು ಇರುವ ಬೈಯಪ್ಪನಹಳ್ಳಿ ನಿಲ್ದಾಣ ಸೇರಿದಂತೆ ಕೆಲವು ನಿಲ್ದಾಣಗಳಲ್ಲಿ ಗೇಟ್‌ ಸಂಖ್ಯೆ ಸಾಲುತ್ತಿರಲಿಲ್ಲ. ಅಲ್ಲಿ ಹೆಚ್ಚುವರಿ ಸ್ವಯಂಚಾಲಿತ ಟೋಕನ್‌ ಗೇಟ್‌ಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದರು.

3 ಬೋಗಿ ರೈಲಿನಲ್ಲಿ ದಟ್ಟಣೆ ಕಿರಿಕಿರಿ

‘ನಮ್ಮ ಮೆಟ್ರೊ’ದ ನೇರಳೆ ಮಾರ್ಗದಲ್ಲಿ ಬಹುತೇಕ ರೈಲುಗಳಲ್ಲಿ ಆರು ಬೋಗಿಗಳನ್ನು ಅಳವಡಿಸಲಾಗಿದೆ. ಆದರೆ, ಹಸಿರು ಮಾರ್ಗದಲ್ಲಿ ಈಗಲೂ ಮೂರು ಬೋಗಿಗಳ ರೈಲುಗಳೇ ಹೆಚ್ಚು ಸಂಚರಿಸುತ್ತಿವೆ. ಬೆಳಿಗ್ಗೆ ಹಾಗೂ ಸಂಜೆಯ ದಟ್ಟಣೆ ಅವಧಿಯಲ್ಲಿ ಬೋಗಿಗಳು ಕಿಕ್ಕಿರಿದು ತುಂಬಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

‘ಹಸಿರು ಮಾರ್ಗದಲ್ಲಿ ಸದ್ಯ 6 ಬೋಗಿಗಳ ಒಂದು ರೈಲು ಮಾತ್ರ ಸಂಚರಿಸುತ್ತಿದೆ. ಹಸಿರು ಮಾರ್ಗದಲ್ಲಿ ನಿತ್ಯ ಸರಾಸರಿ 10 ಸಾವಿರ ಮಂದಿ ಸಂಚರಿಸುತ್ತಿದ್ದರೆ, ನೇರಳೆ ಮಾರ್ಗದಲ್ಲಿ 20 ಸಾವಿರ ಮಂದಿ ಮೆಟ್ರೊ ಬಳಸುತ್ತಿದ್ದಾರೆ. ದಟ್ಟಣೆ ಅವಧಿಯಲ್ಲಿ ಎಷ್ಟು ಪ್ರಯಾಣಿಕರು ಸಂಚರಿಸುತ್ತಾರೆ ಎಂಬ ಅಂಕಿ–ಸಂಖ್ಯೆಗಳ ಆಧಾರದ ಮೇಲೆಯೇ, ಎಷ್ಟು ಬೋಗಿಗಳ ರೈಲು ವ್ಯವಸ್ಥೆ ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ’ ಎಂದು ಯಶವಂತ ಚೌಹಾಣ್‌ ತಿಳಿಸಿದರು.

‘ಹಸಿರು ಮಾರ್ಗದಲ್ಲಿ ಸೆಪ್ಟೆಂಬರ್‌–ಅಕ್ಟೋಬರ್‌ ವೇಳೆಗೆ ಆರು ಬೋಗಿ ರೈಲುಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.