ADVERTISEMENT

ಎರಡು ರೈಲ್ವೆ ಸೇತುವೆಗೆ ಹಣ ಒದಗಿಸಲು ಬಿಎಂಆರ್‌ಸಿಎಲ್ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 2 ಮೇ 2022, 16:32 IST
Last Updated 2 ಮೇ 2022, 16:32 IST
   

ಬೆಂಗಳೂರು: ಮೆಟ್ರೊ ರೈಲು ಮಾರ್ಗದ ಪ್ರಮುಖ ಜವಾಬ್ದಾರಿ ಜತೆಗೆ ಪೂರ್ವ ಬೆಂಗಳೂರಿನಲ್ಲಿ₹15 ಕೋಟಿ ವೆಚ್ಚದಲ್ಲಿ ಎರಡು ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಒಪ್ಪಿಕೊಂಡಿದೆ. ಇದಲ್ಲದೇ ದಿಣ್ಣೂರು ಮುಖ್ಯ ರಸ್ತೆಯಲ್ಲಿ ಮೂರನೇ ರೈಲ್ವೆ ಕೆಳಸೇತುವೆಗೆ ಹಣ ಒದಗಿಸಲು ಬಿಬಿಎಂಪಿ ಕೂಡ ಸಮ್ಮತಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈಲ್ವೆ ಕೆಳ ಸೇತುವೆಗಳ ನಿರ್ಮಾಣಕ್ಕೆ ನೈರುತ್ಯ ರೈಲ್ವೆ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದ್ದು, ಇದಕ್ಕೆ ಬಿಎಂಆರ್‌ಸಿಎಲ್ ಹಣ ಒದಗಿಸಲಿದೆ. ಫ್ರೇಜರ್ ಟೌನ್ ಬಳಿ (ಪಾಟರಿ ರಸ್ತೆಯಿಂದ ನೇತಾಜಿ ರಸ್ತೆಗೆ ಸಂಪರ್ಕಿಸುವ ರಸ್ತೆ) ಒಂದು ಸೇತುವೆ, ಪಾಟರಿ ಟೌನ್ ಮೆಟ್ರೋ ನಿಲ್ದಾಣದ ಬಳಿ (ನೇತಾಜಿ ರಸ್ತೆಯಿಂದ ಬೋರ್ ಬ್ಯಾಂಕ್ ರಸ್ತೆಗೆ ಸಂಪರ್ಕಿಸುವ ರಸ್ತೆ) ಇನ್ನೊಂದು ಕೆಳ ಸೇತುವೆ ನಿರ್ಮಿಸಲು ಯೋಜಿಸಲಾಗಿದೆ.

‘ಡಿಪಿಆರ್‌ ಬಹುತೇಕ ಸಿದ್ಧವಾಗಿದ್ದು, ಒಂದು ವಾರದಲ್ಲಿ ಯೋಜನೆಗೆ ಅಗತ್ಯ ಇರುವ ಹಣ ಠೇವಣಿ ಇರಿಸುತ್ತೇವೆ. ಎರಡು ಕೆಳ ಸೇತುವೆ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿವೆ. ರೈಲ್ವೆ ಇಲಾಖೆ ಮೂಲಕ ಕಾಮಗಾರಿ ಕಾರ್ಯಗತಗೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.

ADVERTISEMENT

ದಿಣ್ಣೂರು ಮುಖ್ಯರಸ್ತೆಯಲ್ಲಿ ಸದ್ಯ ಇರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಬದಲಿಗೆ ಕೆಳ ಸೇತುವೆ ನಿರ್ಮಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ( ಕೆ–ರೈಡ್)ಜತೆ ಅನುದಾನ ಹಂಚಿಕೆ ಮಾಡಿಕೊಳ್ಳಲು ಬಿಬಿಎಂಪಿ ಸಮ್ಮತಿಸಿದೆ. ಭೂಸ್ವಾಧೀನದ ಅಗತ್ಯ ಇರುವುದರಿಂದ ಈ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಕಾಲಾವಕಾಶ ಬೇಕಾಗಲಿದೆ.

‘ರೈಲ್ವೆ ಲೆವೆಲ್‌ ಕ್ರಾಸಿಂಗ್ ತೆಗೆಯುವ ಯಾವುದೇ ಹೂಡಿಕೆಯೂ ಸ್ವಾಗತಾರ್ಹ. ಈ ರೀತಿಯ ಸುಮಾರು 30 ಲೆವೆಲ್‌ ಕ್ರಾಸಿಂಗ್‌ಗಳು ನಗರದಲ್ಲಿವೆ. ಅವುಗಳಲ್ಲಿ ಹೆಚ್ಚಿನವು ಯಶವಂತಪುರ ಮತ್ತು ಹೊಸೂರು ಮಾರ್ಗದಲ್ಲಿವೆ. ಕೆಳ ಸೇತುವೆ ಅಥವಾ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಹಣ ಒದಗಿಸಬೇಕು’ ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣನವರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.