ADVERTISEMENT

ಪುನರ್‌ವಸತಿ ನೆರವು ದುಪ್ಪಟ್ಟು

ಬಿಎಂಆರ್‌ಸಿಎಲ್‌: ಎರಡನೇ ಹಂತದ ಯೋಜನೆ ಸಂತ್ರಸ್ತರಿಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:51 IST
Last Updated 15 ಆಗಸ್ಟ್ 2019, 19:51 IST

ಬೆಂಗಳೂರು:‘ನಮ್ಮ ಮೆಟ್ರೊ’ ಯೋಜನೆಯಿಂದ ಸಂತ್ರಸ್ತರಾದವರಿಗೆ ಪುನರ್‌ವಸತಿ ಮತ್ತು ಪರಿ ಹಾರದ ಪ್ಯಾಕೇಜ್‌ ಅನ್ನು 12 ವರ್ಷಗಳ ನಂತರ ಸರ್ಕಾರವು ನವೀಕರಿಸಿದೆ. ಈ ಪ್ರಮಾಣವನ್ನು ಶೇ 225ಕ್ಕೆ ಏರಿಸಲಾಗಿದೆ. ಕೊಳಗೇರಿ ಪ್ರದೇಶದಲ್ಲಿ ವಾಸಿಸುವವರಿಗೆ ₹5ಲಕ್ಷ ನೆರವು ನೀಡುವುದನ್ನೂ ಈ ಪ್ಯಾಕೇಜ್‌ ಒಳಗೊಂಡಿದೆ.

2007ರ ಪುನರ್‌ ವಸತಿ ಮತ್ತು ಪರಿಹಾರ (ಆರ್‌ ಅಂಡ್‌ ಆರ್‌) ನೀತಿಯಂತೆ, ಎರಡನೇ ಹಂತದ ಮೆಟ್ರೊ ಯೋಜನೆ ಸಂತ್ರಸ್ತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರವು 2016ರ ಡಿಸೆಂಬರ್‌ 22ರಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌)ಗೆ ಅನುಮತಿ ನೀಡಿತ್ತು.

ಮೆಟ್ರೊ ಯೋಜನೆಗೆ ನೇರವಾಗಿ ಮತ್ತು ಪರೋಕ್ಷವಾಗಿ ಹಣಕಾಸು ನೆರವು ಒದಗಿಸುವ ಸಂಸ್ಥೆಗಳು ಬಿಎಂಆರ್‌ಸಿಎಲ್‌ನ ಈ ನೀತಿಯನ್ನು ವಿರೋಧಿಸಿದ್ದು, ಪುನರ್‌ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದವು. 2006–07ರಿಂದ 2018–19ರ ಅವಧಿ ಹಣದುಬ್ಬರ ಏರಿಕೆ ಪರಿಗಣಿಸಿ, ಪರಿಹಾರದ ಮೊತ್ತ ವನ್ನು 2.5 ಪಟ್ಟು ಏರಿಸಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಕಳೆದ ಮೇನಲ್ಲಿ ಪ್ರಸ್ತಾವ ಸಲ್ಲಿಸಿತ್ತು.

ADVERTISEMENT

ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿರುವ ಸರ್ಕಾರ, ಹೆಚ್ಚುವರಿ ವೆಚ್ಚವನ್ನು ನಿಗಮವೇ ಭರಿಸಬೇಕಾಗುತ್ತದೆ ಎಂಬ ಷರತ್ತು ಹಾಕಿದೆ. 2007ರಲ್ಲಿ ನಿಗದಿ ಮಾಡಿದ ಪರಿಹಾರ ಮೊತ್ತಕ್ಕೆ 2.25 ಪಟ್ಟು ಹೆಚ್ಚಿನ ಮಿತಿಯನ್ನು ಮೀರುವಂತಿಲ್ಲ. ಈ ಪ್ರಕಾರವೇ ನವೀಕರಿಸಿದ ಪ್ಯಾಕೇಜ್‌ ಅನುಷ್ಠಾನಕ್ಕೆ ಬರಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಮೆಟ್ರೊ ಯೋಜನೆಯಿಂದ ಸಂತ್ರಸ್ತ ರಾದ, ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳ ಕುಟುಂ ಬವೊಂದಕ್ಕೆ ₹5 ಲಕ್ಷ ನೆರವು ನೀಡುವ ಅಂಶವನ್ನೂ ಈ ಪರಿಷ್ಕೃತ ನೀತಿ ಒಳಗೊಂಡಿದೆ.

ಎರಡನೇ ಹಂತದ ಯೋಜನೆಯಡಿ ಸಂತ್ರಸ್ತರಿಗೆ ಬಿಎಂಆರ್‌ಸಿಎಲ್‌ ಈಗಾಗಲೇ ಆರ್‌ ಆ್ಯಂಡ್‌ ಆರ್‌ ಅಡಿ ಪರಿಹಾರ ಘೋಷಿಸಿದೆ. ಆದರೆ, ಡೈರಿ ವೃತ್ತ ಮತ್ತು ನಾಗವಾರ ನಡುವಿನ ಮಾರ್ಗದಲ್ಲಿ ಉದ್ದೇಶಿತ ಯೋಜನೆಯಡಿ ಸಂತ್ರಸ್ತರಿಗೆ ಪರಿಹಾರ ಸಿಗಬೇಕಿದೆ.

‘ಪರಿಷ್ಕೃತ ನೀತಿ ಅಥವಾ ಹೊಸ ಪ್ಯಾಕೇಜ್‌ ಈ ಮೊದಲಿನ ಯೋಜನೆಗಳಿಗೆ ಅನ್ವಯವಾಗುವುದಿಲ್ಲ. ರೀಚ್‌ 6ರ ನೆಲದಡಿಯ ಮಾರ್ಗದ ಯೋಜನೆಗೆ ಸಂತ್ರಸ್ತರಾಗುವವರಿಗೆ ಇನ್ನೂ ಪರಿಹಾರ ಘೋಷಣೆಯಾಗಿಲ್ಲ. ಹೊಸ ಮಾರ್ಗಗಳನ್ನು ಇದರಲ್ಲಿ ಉಲ್ಲೇಖಿಸಿಲ್ಲ. ನೂತನ ಪ್ಯಾಕೇಜ್‌ ಈ ಯೋಜನೆಗಳಿಗೆ ಅನ್ವಯವಾಗಲಿದೆ’ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ) ಚನ್ನಪ್ಪ ಗೌಡರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.