ADVERTISEMENT

ಬೆಂಗಳೂರು | ಬಸ್ಸಿನಡಿ ಬಿದ್ದ ಬಾಲಕ: ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 10:21 IST
Last Updated 25 ಆಗಸ್ಟ್ 2025, 10:21 IST
   

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್ಸಿನ ಚಕ್ರದ ಅಡಿಗೆ ಬಾಲಕ ಬಿದ್ದು ಭಾನುವಾರ ಮಗು ಮೃತಪಟ್ಟಿತ್ತು. ಇದರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಿ.ಎಂ.ಪಾಳ್ಯ ನಿವಾಸಿ, ಸ್ಥಳೀಯ ದೇವಸ್ಥಾನದ ಅರ್ಚಕ ಸುನಿಲ್ ಕುಮಾರ್ ಅವರು ತನ್ನ ಅಣ್ಣ ದಿವಂಗತ ದಿಲೀಪ್‌ ಕುಮಾರ್‌ ಅವರ ಮಗ ಶಬರೀಶ್‌ನನ್ನು (11) ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಕೆ.ಆರ್.ಮಾರ್ಕೆಟ್‌ಗೆ ಹೊರಟಿದ್ದರು. ಬಿಎಂಟಿಸಿ ಬಸ್‌ ಅನ್ನು ಎಡಬದಿಯಿಂದ ಹಿಂದಿಕ್ಕುವ ಭರದಲ್ಲಿ ದ್ವಿಚಕ್ರ ವಾಹನ ಪಲ್ಟಿಯಾಗಿದ್ದರಿಂದ ಶಬರೀಶ್‌ ಬಸ್ಸಿನ ಚಕ್ರದಡಿಗೆ ಬಿದ್ದಿದ್ದು, ಚಕ್ರ ಅವನ ಮೇಲೆ ಚಲಿಸಿದ್ದರಿಂದ ಸ್ಥಳದಲ್ಲಿಯೇ ಶಬರೀಶ್‌ ಮೃತಪಟ್ಟಿದ್ದನು. ಸುನಿಲ್ ಕುಮಾರ್ ಅವರಿಗೆ ಸಣ್ಣ ಗಾಯಗಳಾಗಿದ್ದವು. 

ಬಿಎಂಟಿಸಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕರು, ವ್ಯಾಪಾರಿಗಳು ಹಲಸೂರು ಗೇಟ್‌ ಸಂಚಾರ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಒತ್ತಾಯಿಸಿದ್ದರು. ಆದರೆ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಪರಿಶೀಲಿಸಿದಾಗ ಬಸ್‌ ಚಾಲಕನಿಂದ ಯಾವುದೇ ತಪ್ಪಾಗಿಲ್ಲ ಎಂಬುದು ಖಚಿತವಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಿಎಂಟಿಸಿ ಘಟಕ 52ಕ್ಕೆ (ಹುತ್ತನಹಳ್ಳಿ) ಸೇರಿದ ಬಸ್‌ ಇದಾಗಿದ್ದು, ಕೆ.ಆರ್‌. ಮಾರುಕಟ್ಟೆಯ ಜಾಮಿಯಾ ಮಸೀದಿ ಬಳಿ ಅಪಘಾತವಾಗಿತ್ತು. ಈ ಸಂದರ್ಭದಲ್ಲಿ ಸಂತೋಷ್‌ ಚಾಲಕನಾಗಿ, ಭಾಸ್ಕರ್‌ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಲಾಯಿತು. ಬಸ್ಸಿನ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿ ಮಧ್ಯದಲ್ಲಿ 11 ವರ್ಷದ ಬಾಲಕನನ್ನು ಕೂರಿಸಿಕೊಂಡು ಮತ್ತಿಬ್ಬರು (ಒಟ್ಟು ಮೂರು ಜನ) ಬರುತ್ತಿದ್ದರು. ಬಸ್‌ ಅನ್ನು ಓವರ್‌ಟೇಕ್‌ ಮಾಡಲು ಎಡಭಾಗದಿಂದ ದ್ವಿಚಕ್ರವಾಹನದ ಸವಾರ ಪ್ರಯತ್ನಿಸಿದ್ದರು. ಅದೇ ಸಂದರ್ಭದಲ್ಲಿ ಮತ್ತೊಂದು ದ್ವಿಚಕ್ರವಾಹನ ಎದುರು ಇದ್ದಿದ್ದನ್ನು ಕಂಡು ಅವರು ಒಮ್ಮೆಲೇ ಬ್ರೇಕ್‌ ಹಾಕಿದ್ದರಿಂದ ಸ್ಕಿಡ್‌ ಆಗಿ ಈ ದ್ವಿಚಕ್ರವಾಹನ ಪಲ್ಟಿಯಾಗಿದೆ. 

ಬಿಎಂಟಿಸಿ ಉತ್ತರ ವಲಯದ ವಿಭಾಗ ನಿಯಂತ್ರಣ ಅಧಿಕಾರಿಗಳು, ಹಾಗೂ ಅಪಘಾತ ಶಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.