ADVERTISEMENT

ಬಿಎಂಟಿಸಿ ನಿರ್ವಾಹಕನ ಮೇಲೆ ಪೊಲೀಸರಿಂದ ಹಲ್ಲೆ: ಆರೋಪ

ಠಾಣೆಗೆ ಮಾಹಿತಿ ನೀಡಿದ ವೈದ್ಯರು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 19:54 IST
Last Updated 31 ಮಾರ್ಚ್ 2019, 19:54 IST

ಬೆಂಗಳೂರು: ‘ಬಿಎಂಟಿಸಿ ಬಸ್ ನಿರ್ವಾಹಕ ವಿ. ಮಂಜುನಾಥ್ ಎಂಬುವರ ಮೇಲೆ ಉಪ್ಪಾರಪೇಟೆ ಠಾಣೆ ಪೊಲೀಸರು ಹಲ್ಲೆ ಮಾಡಿದ್ದಾರೆ‘ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಮಂಜುನಾಥ್‌ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಶನಿವಾರ ಸಂಜೆ ನಡೆದಿರುವ ಘಟನೆ ಸಂಬಂಧ ಗಾಯಾಳುಗಳು ನೀಡಿರುವ ಹೇಳಿಕೆಯಂತೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ, ಪ್ರಕರಣ ದಾಖಲಾಗಿಲ್ಲ.

‘ಉಲ್ಲಾಳ ಉಪನಗರದಿಂದ ಮೆಜೆಸ್ಟಿಕ್‌ ಕಡೆಗೆ ಹೊರಟಿದ್ದ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಬಸ್‌ ಹತ್ತಿದ್ದ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರು, ಟಿಕೆಟ್‌ ಪಡೆಯಲು ನಿರಾಕರಿಸಿದರು. ಏಕೆ ಎಂದು ಪ್ರಶ್ನಿಸಿದ್ದಕ್ಕೆ, ‘ನಾನು ಪೊಲೀಸ್’ ಎಂದು ಹೇಳಿದರು. ಅವರು ಸಮವಸ್ತ್ರ ಧರಿಸಿರಲಿಲ್ಲ. ಹೀಗಾಗಿ, ಗುರುತಿನ ಚೀಟಿ ತೋರಿಸುವಂತೆ ಕೇಳಿದ್ದೆ. ಅದು ಇಲ್ಲದಿದ್ದರೆ ಟಿಕೆಟ್‌ ತೆಗೆದುಕೊಳ್ಳುವಂತೆ ವಿನಂತಿಸಿದ್ದೆ’ ಎಂದು ಮಂಜುನಾಥ್ ಹೇಳಿದರು.

ADVERTISEMENT

‘ಎಷ್ಟೇ ಕೇಳಿದರೂ ಅವರು ಟಿಕೆಟ್ ಪಡೆಯಲಿಲ್ಲ. ‘ಟಿಕೆಟ್ ತಪಾಸಣಾಧಿಕಾರಿಗಳು ಬರುತ್ತಾರೆ. ದಯವಿಟ್ಟು ಟಿಕೆಟ್ ತೆಗೆದುಕೊಳ್ಳಿ. ಇಲ್ಲದಿದ್ದರೆ ನನ್ನ ಕೆಲಸ ಹೋಗುತ್ತದೆ’ ಎಂದು ಪುನಃ ವಿನಂತಿಸಿದ್ದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಟಿಕೆಟ್ ಪಡೆಯುವಂತೆ ಅವರಿಗೆ ಹೇಳಿದ್ದರು. ಅವಾಗಲೇ ಅವರು ಟಿಕೆಟ್ ಪಡೆದಿದ್ದರು.’

‘ಬಸ್ಸಿನಲ್ಲಿರುವಾಗಲೇ ಪೊಲೀಸ್ ಠಾಣೆಗೆ ಕರೆ ಮಾಡಿದ್ದ ಮಹಿಳಾ ಕಾನ್‌ಸ್ಟೆಬಲ್, ನಾಲ್ವರು ಪೊಲೀಸರನ್ನು ಮೆಜೆಸ್ಟಿಕ್‌ ನಿಲ್ದಾಣಕ್ಕೆ ಕರೆಸಿಕೊಂಡಿದ್ದರು. ಬಸ್‌ ಮೆಜೆಸ್ಟಿಕ್‌ ನಿಲ್ದಾಣಕ್ಕೆ ಬರುತ್ತಿದ್ದಂತೆ ನನ್ನನ್ನು ಹಾಗೂ ಚಾಲಕನನ್ನು ಆ ನಾಲ್ವರು ಪೊಲೀಸರು, ಉಪ್ಪಾರಪೇಟೆ ಠಾಣೆಗೆ ಎಳೆದುಕೊಂಡು ಹೋಗಿದ್ದರು. ಅವರೆಲ್ಲರೂ ಸೇರಿ ಠಾಣೆಯಲ್ಲೇ ನನ್ನನ್ನು ಥಳಿಸಿದರು’ ಎಂದು ಮಂಜುನಾಥ್ ದೂರಿದರು.

ಸಾರಿಗೆ ನಿಗಮಗಳ ನೌಕರರ ಒಕ್ಕೂಟದ ಸಿದ್ದಪ್ಪ ಬಾಲ್ಕಿ, ‘ಸಮವಸ್ತ್ರದಲ್ಲಿರುವ ಪೊಲೀಸರಿಗೆ ಮಾತ್ರ ಬಸ್ಸಿನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶವಿದೆ. ಆದರೆ, ಅವರು ಕರ್ತವ್ಯದ ಮೇಲೆಯೇ ಪ್ರಯಾಣಿಸುತ್ತಿದ್ದಾರೆ ಎಂಬುದಕ್ಕೆ ದಾಖಲೆಯನ್ನು ತೋರಿಸಬೇಕಾಗುತ್ತದೆ’ ಎಂದರು.

‘ಚಾಲಕ ಹಾಗೂ ನಿರ್ವಾಹಕನ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಘಟನೆ ಖಂಡನೀಯ. ಕೂಡಲೇ ಎಫ್‌ಐಆರ್‌ ದಾಖಲಿಸಿಕೊಂಡು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

**

ಘಟನೆ ಸಂಬಂಧ ಉಪ್ಪಾರಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ ಅವರಿಂದ ವರದಿ ಪಡೆದು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
– ರವಿ ಚನ್ನಣ್ಣನವರ, ಡಿಸಿಪಿ, ಪಶ್ಚಿಮ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.