ಸಾವು
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಜಯನಗರದ ಬಿಎಂಟಿಸಿ ಬಸ್ ಟರ್ಮಿನಲ್‌ನಲ್ಲಿ ಬುಧವಾರ ಬೆಳಿಗ್ಗೆ ಎಲೆಕ್ಟ್ರಿಕ್ ಬಸ್‌ನ ಚಕ್ರಕ್ಕೆ ಸಿಲುಕಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ಜಯನಗರ 9ನೇ ಬ್ಲಾಕ್ ನಿವಾಸಿ ಸಂಪಂಗಿ(64) ಮೃತಪಟ್ಟವರು.
ಕೆ.ಆರ್.ಮಾರುಕಟ್ಟೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಸಂಪಂಗಿ ಅವರು ಬೆಳಿಗ್ಗೆ 9ರ ಸುಮಾರಿಗೆ ಮಾರುಕಟ್ಟೆಗೆ ಹೋಗಲು ಜಯನಗರದ ಬಿಎಂಟಿಸಿ ಬಸ್ ಟರ್ಮಿನಲ್‌ನಲ್ಲಿ ಓಡಿ ಬಂದು ಎಲೆಕ್ಟ್ರಿಕ್ ಬಸ್ ಹತ್ತಲು ಯತ್ನಿಸಿದರು. ಅದನ್ನು ಗಮನಿಸದ ಚಾಲಕ ಏಕಾಏಕಿ ಬಸ್‌ನ ಬಾಗಿಲು ಮುಚ್ಚಿದ್ದರು. ಕೆಳಗೆ ಬಿದ್ದ ಸಂಪಂಗಿ ಅವರ ಮೇಲೆ ಬಸ್‌ನ ಹಿಂಭಾಗದ ಚಕ್ರ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.
ಜಯನಗರದ ಡಿಪೊ–4ರ ಚಾಲಕ ಮಧ್ವರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಂಗಳಲ್ಲಿ ಏಳು ಮಂದಿ ಸಾವು: ನಗರದ ವಿವಿಧೆಡೆ ಜುಲೈ 18ರಿಂದ ಆಗಸ್ಟ್ 20ರವರೆಗೆ ಬಿಎಂಟಿಸಿ ಬಸ್‍ಗಳಿಂದ ಸಂಭವಿಸಿದ ಅಪಘಾತಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಡೀಸೆಲ್ ಬಸ್‍ಗಳಿಗಿಂತ ವಿದ್ಯುತ್ ಚಾಲಿತ ಎಲೆಕ್ಟ್ರಿಕ್ ಬಸ್‍ಗಳಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸಿವೆ ಎಂದು ಸಂಚಾರ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.