ADVERTISEMENT

ವಜಾಗೊಂಡ ನೌಕರರ ನೇಮಕಕ್ಕೆ ಮುಂದಾದ ಬಿಎಂಟಿಸಿ

ಷರತ್ತುಗಳಲ್ಲ, ನೌಕರರ ಪಾಲಿನ ಮರಣ ಶಾಸನ: ಸಂಘಟನೆಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 20:31 IST
Last Updated 9 ಏಪ್ರಿಲ್ 2022, 20:31 IST
   

ಬೆಂಗಳೂರು: ಮುಷ್ಕರದ ವೇಳೆ ವಜಾಗೊಂಡಿದ್ದ ಸಿಬ್ಬಂದಿಗಳ ಮರು ನೇಮಕಕ್ಕೆ ಬಿಎಂಟಿಸಿ ಮುಂದಾಗಿದೆ. ಅದಕ್ಕೆ ವಿಧಿಸಿರುವ ಷರತ್ತುಗಳು ನೌಕರರ ಪಾಲಿಗೆ ಮರಣ ಶಾಸನವಾಗಿವೆ ಎಂಬ ಆಕ್ಷೇಪ ನೌಕರರ ಸಂಘಟನೆಗಳಿಂದ ವ್ಯಕ್ತವಾಗಿದೆ.

ಆರನೇ ವೇತನ ಆಯೋಗದ ಶಿಫಾರಸುಗಳನ್ನು ಸಾರಿಗೆ ನೌಕರರಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಿ 2021ರ ಏಪ್ರಿಲ್ 7ರಿಂದ 21ರವರೆಗೆ ನೌಕರರು ಮುಷ್ಕರ ನಡೆಸಿದ್ದರು. ಕರ್ತವ್ಯಕ್ಕೆ ಗೈರಾಗಿ ಮುಷ್ಕರಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ 1,392 ನೌಕರರನ್ನು ಬಿಎಂಟಿಸಿ ವಜಾಗೊಳಿಸಲಾಗಿತ್ತು.

ಯಾವುದೇ ಷರತ್ತು ವಿಧಿಸದೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ನೌಕರರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿದ್ದವು. ಈಗ ಮರು ನೇಮಕಾತಿ ಆದೇಶ ಪತ್ರವನ್ನು ಸಾರಿಗೆ ಸಚಿವ ಶ್ರೀರಾಮುಲು ಅವರು ಸೋಮವಾರ ವಿತರಣೆ ಮಾಡಲಿದ್ದಾರೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

ADVERTISEMENT

‘ತರಬೇತಿ ಅವಧಿಯಲ್ಲಿದ್ದ ಮತ್ತು ಪ್ರೊಬೇಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ. ಅವರು ಕರ್ತವ್ಯ ನಿರ್ವಹಿಸಿದ ಅವಧಿಯನ್ನು ಪರಿಗಣಿಸದೆ ಹೊಸದಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ 700ಕ್ಕೂ ಹೆಚ್ಚು ಕಾಯಂ ನೌಕರರ ಮರು ನೇಮಕ ಆಗಬೇಕಿದೆ. ಅದರಲ್ಲಿ 53 ಜನರಿಗಷ್ಟೇ ಸೋಮವಾರ ಮರು ನೇಮಕ ಆದೇಶ ನೀಡಲು ಬಿಎಂಟಿಸಿ ಸಿದ್ಧತೆ ಮಾಡಿಕೊಂಡಿದೆ’ ಎಂದು ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

‘ಯಾವುದೇ ಷರತ್ತುಗಳನ್ನು ವಿಧಿಸದೆಯೇ ಮರು ನೇಮಕ ಮಾಡಿಕೊಳ್ಳಲಾಗುವುದು ಎಂದು ಪದೇ ಪದೇ ಹೇಳುತ್ತಿದ್ದ ಸಾರಿಗೆ ಸಚಿವರು, ಈಗ ಇನ್ನಿಲ್ಲದ ಷರತ್ತುಗಳನ್ನು ವಿಧಿಸಿದ್ದಾರೆ. ಬಿಎಂಟಿಸಿ ಈಗ ನೀಡಲು ಹೊರಟಿರುವುದು ನೇಮಕಾತಿ ಆದೇಶವಲ್ಲ, ಮರಣ ಶಾಸನ’ ಎಂದು ಅವರು ಹೇಳಿದರು.

‘ಮರು ನೇಮಕಗೊಳ್ಳುವ ಸಿಬ್ಬಂದಿಗೆ ಸೇವಾ ಅವಧಿಯಲ್ಲಿ ವೇತನ ಹೆಚ್ಚಳ (ಇಂಕ್ರಿಮೆಂಟ್‌) ಮತ್ತು ಬಡ್ತಿ ಇರುವುದಿಲ್ಲ ಎಂಬ ಷರತ್ತು ವಿಧಿಸಲಾಗಿದೆ. ಇದರಿಂದ ಪ್ರತಿ ನೌಕರರಿಗೆ ಕನಿಷ್ಠ ₹5 ಲಕ್ಷದಷ್ಟು ನಷ್ಟವಾಗಲಿದೆ. ಸೇವೆಯ ನಿರಂತರತೆಯನ್ನೂ ಖಾತ್ರಿಪಡಿಸುತ್ತಿಲ್ಲ. ಇದು ನೌಕರರ ಗ್ರಾಚ್ಯುಟಿ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಪ್ರತಿ ನೌಕರನಿಗೆ ₹7 ಲಕ್ಷದಿಂದ ₹8 ಲಕ್ಷದ ತನಕ ನಷ್ಟವಾಗಲಿದೆ’ ಎಂದು ಚಂದ್ರಶೇಖರ್ ವಿವರಿಸಿದರು.

‘ತನಿಖೆ ನಡೆಸದೆಯೇ ನೌಕರರನ್ನು ವಜಾಗೊಳಿಸಲಾಗಿದೆ. ಕೂಡಲೇ ಅವರನ್ನು ಸೇವೆಗೆ ಮರು ನೇಮಕ ಮಾಡಿಕೊಳ್ಳಬೇಕು. ಇಲ್ಲವೇ ಅರ್ಧ ಸಂಬಳ ನೀಡಬೇಕು ಎಂದು ಕಾರ್ಮಿಕ ನ್ಯಾಯಾಲಯ ಆದೇಶ ನೀಡಿದೆ. ಆದ್ದರಿಂದ ನೆಪಮಾತ್ರಕ್ಕೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ನೌಕರರಿಗೆ ಯಾವುದೇ ಪ್ರಯೋಜನ ಇಲ್ಲ. ಇದಕ್ಕೆ ನಮ್ಮ ವಿರೋಧ ಇದೆ’ ಎಂದರು.

ಈ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರ ಪ್ರಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.