ADVERTISEMENT

ಮತ ಬ್ಯಾಂಕಿಗಾಗಿ ಸಮಾಜ ಒಡೆಯುವ ಕಾಂಗ್ರೆಸ್‌: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 20:25 IST
Last Updated 6 ಏಪ್ರಿಲ್ 2022, 20:25 IST
ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕಾಡುಮಲ್ಲೇಶ್ವರ ದೇವಸ್ಥಾನದಿಂದ ಪಕ್ಷದ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದ ಸಿ.ಟಿ.ರವಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಇತರರು
ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕಾಡುಮಲ್ಲೇಶ್ವರ ದೇವಸ್ಥಾನದಿಂದ ಪಕ್ಷದ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದ ಸಿ.ಟಿ.ರವಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಇತರರು   

ಬೆಂಗಳೂರು: ಮತಾಂಧತೆ ಕಾಂಗ್ರೆಸ್‌ ಪಕ್ಷವನ್ನು ಆವರಿಸಿಕೊಂಡಿದ್ದು, ಮತ ಬ್ಯಾಂಕಿಗಾಗಿ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೂರಿದರು.

ಬುಧವಾರ ನಗರದದಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ಶಾದಿ ಭಾಗ್ಯದಂತ ಸಮಾಜ ಒಡೆಯುವ ಯೋಜನೆಯನ್ನು ನರೇಂದ್ರಮೋದಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಾಗಲೀ ಕೊಟ್ಟಿದ್ದಲ್ಲ. ಅದನ್ನು ಸಿದ್ದರಾಮಯ್ಯ ಕೊಟ್ಟಿದ್ದು ಎಂದು ಹೇಳಿದರು.

ವಿರೋಧ ಪಕ್ಷಗಳಿಗೆ ಟೀಕೆ ಮಾಡಲೇಬೇಕು ಎಂಬ ಧೋರಣೆ ಇದೆ. ಮೆಚ್ಚುವ ಔದಾರ್ಯ ಅವರಲ್ಲಿಲ್ಲ. ಸಮವಸ್ತ್ರ ವಿರುದ್ಧ ಹಿಜಾಬ್‌ ವಿಷಯವನ್ನು ಎತ್ತಿಕೊಂಡು ಬಂದವರಿಗೆ ಅವರು ಪಾಠ ಹೇಳಬೇಕಿತ್ತು. ದೇಶದ ಶಾಲಾ–ಕಾಲೇಜುಗಳಲ್ಲಿ 1983 ರಿಂದ ಸಮವಸ್ತ್ರ ಕಡ್ಡಾಯವಿದೆ. ಬಿಜೆಪಿ ಇದ್ದನ್ನು ಕಡ್ಡಾಯಗೊಳಿಸಿದ್ದಲ್ಲ. ಹಿಜಾಬ್ ವರ್ಸಸ್‌ ಸಮವಸ್ತ್ರದ ವಿಷಯ ಬಂದಾಗ ಸಮವಸ್ತ್ರ ಪರ ನಿಲ್ಲುತ್ತಾರೋ ಹಿಜಾಬವ್‌ ಪರ ನಿಲ್ಲುತ್ತಾರೋ ಎಂಬುದನ್ನು ಕಾಂಗ್ರೆಸ್‌ನವರು ಸ್ಪಷ್ಟಪಡಿಸಲಿ. ನಾವಂತೂ ಸಮವಸ್ತ್ರದ ಪರ ಇದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಬಿಜೆಪಿ ಕೋಮುವಾದಕ್ಕೆ ಕುಮ್ಮಕ್ಕು ನೀಡಿದೆ ಎಂಬ ಸಿದ್ದರಾಮಯ್ಯ ಅವರ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿಯವರ ಹೆಸರು ಮತ್ತು ಕೆಲಸ ಕಾರ್ಯಗಳು ನಮಗೆ ಗೆಲುವು ತಂದು ಕೊಟ್ಟಿವೆ. ನಮಗೆ ಕೋಮು ಭಾವನೆಗೆ ಕುಮ್ಮಕ್ಕು ನೀಡುವ ಅವಶ್ಯಕತೆ ಇಲ್ಲ. ಅವರಿಗೆ ಪ್ರಾಮಾಣಿಕತೆ ಇದೆಯೇ? ಹಿಜಾಬ್‌ ಸಂಘರ್ಷಕ್ಕೆ ನೆರವು ಒದಗಿಸಿದವರು ಯಾರು? ಹಿಜಾಬ್‌ ಪರ ಎಲ್ಲ ವಕೀಲರು ಕಾಂಗ್ರೆಸ್‌ನವರೇ ಆಗಿದ್ದರು. ನಾವು ಹೈಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್‌ ನಿಲುವೇನು ಎಂದು ರವಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.