ADVERTISEMENT

ಬೊಮ್ಮನಹಳ್ಳಿ ಭಾಗದ ಮಳೆಹಾನಿ ಪ್ರದೇಶಕ್ಕೆ ಮುಖ್ಯಮಂತ್ರಿ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 16:53 IST
Last Updated 18 ಅಕ್ಟೋಬರ್ 2021, 16:53 IST
ಎಚ್ಎಸ್ಆರ್ ಬಡಾವಣೆ ಬಳಿ ಉಕ್ಕಿ ಹರಿಯುತ್ತಿರುವ ಚರಂಡಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲಿಸಿದರು. ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಇದ್ದಾರೆ
ಎಚ್ಎಸ್ಆರ್ ಬಡಾವಣೆ ಬಳಿ ಉಕ್ಕಿ ಹರಿಯುತ್ತಿರುವ ಚರಂಡಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲಿಸಿದರು. ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಇದ್ದಾರೆ   

ಬೊಮ್ಮನಹಳ್ಳಿ: ‘ನಗರದ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ವಿಶೇಷ ಸಭೆ ಕರೆಯಲಾಗುವುದು. ನಗರದ ಪರಿಷ್ಕೃತ ಮಹಾ ಯೋಜನೆ ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಳೆದ ಹಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ಹಾನಿಯಾಗಿರುವ ಬೊಮ್ಮನಹಳ್ಳಿ ಭಾಗದ ಎಚ್‌ಎಸ್ಆರ್ ಬಡಾವಣೆಯ ಜೆಎಸ್‌ಎಸ್ ಕಾಲೇಜು, ಜಾಕಿ ಶೋರೂಂ, ಸಿಲ್ಕ್ ಬೋರ್ಡ್ ಜಂಕ್ಷನ್, ಹೊಸೂರು ರಸ್ತೆಯ ಆಕ್ಸ್‌ಫರ್ಡ್ ಕಾಲೇಜು, ಮಡಿವಾಳ ಬಳಿಯ ರಾಜಕಾಲುವೆಗಳನ್ನು ಪರಿಶೀಲಿಸಿದರು.

‘ಯೋಜನೆ ಇಲ್ಲದೇ ಅವೈಜ್ಞಾನಿಕವಾಗಿ ನಗರ ಕಟ್ಟಿದರೆ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಮುಂದಿನ 25 ವರ್ಷಗಳಿಗೆ ಬೇಕಾಗುವ ಪರಿಷ್ಕೃತ ನಗರ ಮಹಾ ಯೋಜನೆ ತಯಾರಿಸಲು ಸೂಚನೆ ನೀಡಿದ್ದೇನೆ’ ಎಂದರು.

ADVERTISEMENT

‘ಅಗರ ಸುತ್ತಲಿನ ಬಡಾವಣೆಗಳಿಗೆ ಪ್ರತ್ಯೇಕ ಚರಂಡಿ ನಿರ್ಮಾಣ ಕಾರ್ಯವನ್ನು 4-5 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಒಳಚರಂಡಿ ಹಾಗೂ ಕೊಳಚೆ ನೀರು ಪ್ರತ್ಯೇಕಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಅಗರ ಎಸ್‌ಟಿಪಿ ಘಟಕದ ಸಾಮರ್ಥ್ಯ 35 ಎಂಎಲ್‌ಡಿ ಇದ್ದರೂ ಕೇವಲ 25 ಎಂಎಲ್‌ಡಿ ನೀರು ಸಂಸ್ಕರಿಸಲಾಗುತ್ತಿದೆ. ಶುದ್ಧೀಕರಣಗೊಂಡ ನೀರು ಮತ್ತೆ ಚರಂಡಿ ಸೇರುತ್ತಿರುವುದನ್ನು ಗಮನಿಸಿದ್ದೇನೆ. ತಕ್ಷಣವೇ ಸರಿಪಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ಮಡಿವಾಳ ಕೆರೆಗೆ ಹೊಂದಿಕೊಂಡಂತೆ ಇರುವ 4 ಎಂಎಲ್‌ಡಿ ಎಸ್‌ಟಿಪಿ ಘಟಕ ಕಾರ್ಯಾರಂಭ ಮಾಡಿಲ್ಲ. 4-5 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

‘ಎತ್ತರದ ಪ್ರದೇಶಗಳ ಹಲವು ಕೆರೆಗಳಿಂದ ತಗ್ಗು ಪ್ರದೇಶವಾದ ಬೊಮ್ಮನಹಳ್ಳಿ ಭಾಗಕ್ಕೆ ಹರಿದು ಬರುತ್ತಿದೆ. ಇದರಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ತಾತ್ಕಾಲಿಕ ಪರಿಹಾರದ ಬದಲು ಶಾಶ್ವತ ಪರಿಹಾರ ರೂಪಿಸಬೇಕಿದೆ. ವೈಜ್ಞಾನಿಕವಾಗಿ ಒಳಚರಂಡಿ ನಿರ್ಮಾಣ ಆಗಬೇಕಿದೆ. ಅದನ್ನು ಒಮ್ಮೆಲೆ ಮಾಡಲು ಸಾಧ್ಯವಿಲ್ಲ. ಹಂತ–ಹಂತವಾಗಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್,ಮುಖ್ಯ ಆಯುಕ್ತ ಗೌರವ್‌ ಗುಪ್ತ, ಜಲಮಂಡಳಿ ಅಧ್ಯಕ್ಷ ಎನ್.ಜಯರಾಂ ಇದ್ದರು.

‘ಸಮನ್ವಯದ ಕೊರತೆ’

‘ಬಿಬಿಎಂಪಿ, ಜಲಮಂಡಳಿ ಮತ್ತು ಬೆಸ್ಕಾಂ ನಡುವೆ ಸಮನ್ವಯ ಕೊರತೆ ಕಾಣುತ್ತಿದ್ದು, ಇದರಿಂದ ಅನೇಕ ಸಮಸ್ಯೆಗಳು ನಗರವನ್ನು ಕಾಡುತ್ತಿವೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಸಮನ್ವಯ ಸಾಧಿಸಲು ಅಗತ್ಯ ಯೋಜನೆ ರೂಪಿಸಲು ಸದ್ಯದಲ್ಲೇ ಉನ್ನತ ಮಟ್ಟದ ಸಭೆ ಕರೆಯಲಾಗುವುದು’ ಎಂದು ತಿಳಿಸಿದರು.

ಸಂಸ್ಕರಿಸಿದ ನೀರು ಮತ್ತೆ ಚರಂಡಿಗೆ

ಸಂಸ್ಕರಿಸಿದ ನೀರನ್ನೂ ಚರಂಡಿಗೆ ಹರಿಸುತ್ತಿರುವುದನ್ನು ಶಾಸಕ ಸತೀಶ್ ರೆಡ್ಡಿ ಅವರು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.

‘ಅಗರ ಕೆರೆಯಲ್ಲಿ 35 ಎಂಎಲ್‌ಡಿ ಸಾಮರ್ಥ್ಯದ ಸಂಸ್ಕರಣಾ ಘಟಕದಿಂದ ನೀರು ಸಂಸ್ಕರಣೆ ಆಗುತ್ತಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ’ ಎಂದು ಮುಖ್ಯಮಂತ್ರಿ ಎದುರು ದೂರಿದರು.

‘ಆನೇಕಲ್, ಬೆಂಗಳೂರು ದಕ್ಷಿಣ, ಗೊಟ್ಟಿಗೆರೆ ಪ್ರದೇಶಗಳ ಸುಮಾರು 35 ಕೆರೆಗಳಿಂದ ಬೊಮ್ಮನಹಳ್ಳಿ ಪ್ರದೇಶಕ್ಕೆ ನೀರು ಹರಿದು ಬರುತ್ತಿದೆ. ಈಗಿರುವ ಒಳಚರಂಡಿ ವ್ಯವಸ್ಥೆಯು ಇದಕ್ಕೆ ಸಾಕಾಗುವುದಿಲ್ಲ. ಇದನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.