ADVERTISEMENT

‘ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಮಾಯ’

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:07 IST
Last Updated 27 ಮೇ 2019, 19:07 IST
ಸಿ.ಎಂ.ರಾಮಚಂದ್ರ ಅವರ ಪುಸ್ತಕವನ್ನು ಕೆ.ಆರ್‌.ರಮೇಶ್‌ ಕುಮಾರ್ ಬಿಡುಗಡೆ ಮಾಡಿದರು. ಕಾಂಗ್ರೆಸ್‌ ಮುಖಂಡ ಬಿ.ಕೆ.ಚಂದ್ರಶೇಖರ್, ಹಿರಿಯ ಪತ್ರಕರ್ತ ಅರಕೆರೆ ಜಯರಾಂ ಇದ್ದಾರೆ –ಪ್ರಜಾವಾಣಿ ಚಿತ್ರ
ಸಿ.ಎಂ.ರಾಮಚಂದ್ರ ಅವರ ಪುಸ್ತಕವನ್ನು ಕೆ.ಆರ್‌.ರಮೇಶ್‌ ಕುಮಾರ್ ಬಿಡುಗಡೆ ಮಾಡಿದರು. ಕಾಂಗ್ರೆಸ್‌ ಮುಖಂಡ ಬಿ.ಕೆ.ಚಂದ್ರಶೇಖರ್, ಹಿರಿಯ ಪತ್ರಕರ್ತ ಅರಕೆರೆ ಜಯರಾಂ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.

ಪತ್ರಕರ್ತ ಸಿ.ಎಂ. ರಾಮಚಂದ್ರ ಅವರ ‘ಕಾಕ್‍ಪಿಟ್ ಆಫ್ ಇಂಡಿಯಾಸ್ ಪೊಲಿಟಿಕಲ್ ಬ್ಯಾಟಲ್ಸ್ - ಕರ್ನಾಟಕ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಗರದ ಸುಭಾಷ್ ನಗರ ಮೈದಾನದಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ, ಎನ್.ಜಿ.ರಂಗ, ಕೃಷ್ಣ ಮೆನನ್, ಅಟಲ್ ಬಿಹಾರಿ ವಾಜಪೇಯಿ ಅವರಂತಹ ಮೇರುನಾಯಕರ ಸಾರ್ವಜನಿಕ ಸಭೆಗಳಿಗೆ ಜನಸಾಗರವೇ ಹರಿದು ಬರುತ್ತಿತ್ತು. ಈಗ ಸಾರ್ವಜನಿಕ ಸಭೆಗಳಿಗೆ ಜನರನ್ನು ಕರೆತರಲು ಸಾರಿಗೆ ಸೌಲಭ್ಯ ಕಲ್ಪಿಸುವುದರ ಜೊತೆಗೆ ಪ್ಯಾಕೇಟ್ ಟು ಪೇಮೆಂಟ್ (ಊಟದ ಬುತ್ತಿಯಿಂದ ಹಿಡಿದು ಸಂಭಾವನೆಯವರೆಗೆ) ಎಲ್ಲವನ್ನೂ ವ್ಯವಸ್ಥೆ ಮಾಡಬೇಕಾಗಿದೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಅತ್ಯಂತ ಸುಶಿಕ್ಷಿತರು ಹಾಗೂ ಪ್ರಜ್ಞಾವಂತರೂ ಇದ್ದಾರೆ ಎಂದು ಹೇಳುತ್ತಾರೆ. ಆದರೆ, ಮತದಾನದ ಅಂಕಿ-ಅಂಶಗಳನ್ನು ಅವಲೋಕಿಸಿದಾಗ, ಮತದಾನದ ಹಕ್ಕನೇ ತ್ಯಾಗ ಮಾಡಿದ ಮಹನೀಯರು ರಾಜಧಾನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹವರು ನಿಜವಾಗಿಯೂ ವಿಶ್ವಾಸ ಘಾತುಕರು’ ಎಂದರು.

‘ನ್ಯಾಯಾಲಯಗಳು ತೀರ್ಪುಗಳನ್ನು ಪ್ರಕಟಿಸುತ್ತಿವೆಯೇ ಹೊರತು ನ್ಯಾಯ ಕೊಡುತ್ತಿಲ್ಲ ಎಂಬ ಅಭಿಪ್ರಾಯಗಳು ಹೊರಹೊಮ್ಮುತ್ತಿವೆ. ನ್ಯಾಯಮೂರ್ತಿ ಹಾಗೂ ನ್ಯಾಯಾಧೀಶರಲ್ಲೇ ಒಳಜಗಳಗಳು ಹಾಗೂ ವಿಶ್ವವಿದ್ಯಾಲಯಗಳ ಕುಲಪತಿಗಳ ಮೇಲೆಯೇ ಸಿಐಡಿ ವಿಚಾರಣೆಗಳು ನಡೆಯುತ್ತಿವೆ. ಮಾಧ್ಯಮಗಳ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಸರ್ಕಾರಿ ಕಚೇರಿಗಳಲ್ಲಿ ಮರಣ ಪ್ರಮಾಣಪತ್ರ ಪಡೆಯಲೂ ಲಂಚ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.