ಬೆಂಗಳೂರು: ‘ನಟಿ ಜಯಂತಿ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಪ್ರಯತ್ನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಸೌರಭ ಪ್ರಕಾಶನ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಕೆ.ಸದಾಶಿವ ಶೆಣೈ ಅವರು ರಚಿಸಿರುವ ಜಯಂತಿ ಅವರ ಜೀವನಗಾಥೆ ‘ಲವ್ಲಿ ಬಟ್ ಲೋನ್ಲಿ’ ಪುಸ್ತಕ ಬಿಡುಗಡೆ ಮಾಡಿದರು.
ಇದಕ್ಕೂ ಮೊದಲು ಮಾತನಾಡಿದ ಕೆ.ಸದಾಶಿವ ಶೆಣೈ, ‘ಜಯಂತಿ ಅವರ ಹೆಸರು ಅಜರಾಮರವಾಗಲು ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ‘ಚಿತ್ರರಂಗದವರ ಅಭಿಪ್ರಾಯ ಪಡೆದು, ಪ್ರಶಸ್ತಿ ಸ್ಥಾಪಿಸಲು ಪ್ರಯತ್ನಿಸುತ್ತೇನೆ. ಕಲಾವಿದೆಯಾಗಿ ಜಯಂತಿಗೆ ಜಯಂತಿಯವರೇ ಸಾಟಿ. ಅವರು ಮಾನವೀಯವಾಗಿ ಬದುಕು ನಡೆಸಿ, ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ. ನನ್ನ ಮತ್ತು ಜಯಂತಿ ಅವರ ರಾಜಕೀಯ ಮೌಲ್ಯಗಳು ಒಂದೇ ಆಗಿದ್ದವು. ಅವರು ಕೂಡ ಸಮಾಜ ಪ್ರೇಮಿ, ಮಾನವೀಯತೆಯ ಪ್ರೇಮಿಯಾಗಿದ್ದರು’ ಎಂದು ಬಣ್ಣಿಸಿದರು.
‘ಜಯಂತಿ ಅವರ ಅಭಿನಯ ಮರೆಯಲು ಸಾಧ್ಯವಿಲ್ಲ. ಪಾತ್ರಕ್ಕೆ ಜೀವತುಂಬುವ ಕೆಲಸವನ್ನು ಅವರು ಮಾಡುತ್ತಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಟ ರಮೇಶ್ ಅರವಿಂದ್, ‘ಅಭಿನಯ ಶಾರದೆ ಎಂಬ ಖ್ಯಾತಿ ಪಡೆದಿದ್ದ ಜಯಂತಿ ಅವರು ಸೌಂದರ್ಯವಂತಿಕೆಯ ಜತೆಗೆ ಸೌಮ್ಯ ಸ್ವಭಾವದ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು. ಅವರ ಕುರಿತು ಆತ್ಮಚರಿತ್ರೆ ಬಿಡುಗಡೆಗೊಳ್ಳುತ್ತಿರುವುದು ಸಂತೋಷದ ಸಂಗತಿ’ ಎಂದು ಹೇಳಿದರು.
ನಟ ಶ್ರೀನಾಥ್, ‘ಜಯಂತಿ ಅವರ ಮೊದಲ ಹೆಸರು ಕಮಲಾ. ಜಯಂತಿ ಕಣ್ಣಿನಲ್ಲೇ ಅಭಿನಯ ಮಾಡುತ್ತಿದ್ದರು. ಜೀವನದಲ್ಲಿ ತಾನೆಷ್ಟೇ ಒಂಟಿಯಾಗಿದ್ದರೂ ಮತ್ತೊಬ್ಬರನ್ನು ನಗಿಸುತ್ತಿದ್ದ ವ್ಯಕ್ತಿ ಜಯಂತಿ’ ಎಂದರು.
ಕೃತಿ ಬಗ್ಗೆ ಮಾತನಾಡಿದ ಪತ್ರಕರ್ತ ಬೆಲಗೂರು ಸಮೀವುಲ್ಲಾ, ‘ಜಯಂತಿ ಅವರ ಆತ್ಮಕತೆಯಲ್ಲಿ ವೈಭವೀಕರಣ ಕಾಣಿಸುವುದಿಲ್ಲ. ಜೀವನಪ್ರೀತಿ ತೆರೆದಿಡುವ ಪುಸ್ತಕ ಇದಾಗಿದೆ. ವೈವಿಧ್ಯಮಯ, ವೈಶಿಷ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಹೊಸ ಮೆರುಗು ನೀಡಿದ್ದರು’ ಎಂದರು.
ಜಯಂತಿ ಅವರ ಪುತ್ರ ಕೃಷ್ಣ ಕುಮಾರ್, ‘ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು. ಬೆಳೆದಷ್ಟೂ ತಗ್ಗಿ ನಡೆಯಬೇಕು ಎಂಬ ಕಿವಿಮಾತನ್ನು ಅಮ್ಮ ಹೇಳಿದ್ದರು. ಅದನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ವೈಯಕ್ತಿಕವಾಗಿ ಅವರು ಒಂಟಿತನ ಎದುರಿಸಿದ್ದರು. ಅವರು ತಾವು ಅನುಭವಿಸಿದ ದುಃಖವನ್ನು ಹಂಚಿಕೊಳ್ಳುತ್ತಿರಲಿಲ್ಲ’ ಎಂದು ಹೇಳಿದರು.
ನಿರ್ದೇಶಕರಾದ ಕವಿತಾ ಲಂಕೇಶ್, ಇಂದ್ರಜಿತ್ ಲಂಕೇಶ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.