ADVERTISEMENT

‘ಸಿಲಿಕಾನ್ ಸಿಟಿ’ಯನ್ನು ಅಣಕಿಸುವ ರಸ್ತೆಗುಂಡಿಗಳು

ಪ್ರವೀಣ ಕುಮಾರ್ ಪಿ.ವಿ.
Published 8 ನವೆಂಬರ್ 2020, 22:25 IST
Last Updated 8 ನವೆಂಬರ್ 2020, 22:25 IST
ನಗರದ ನಾಗರಬಾವಿ ಒಂದನೇ ಹಂತ ಸುಮ್ಮನಹಳ್ಳಿ ಬಳಿ ರಸ್ತೆ ಹಾಳಾಗಿತ್ತು ಸಾರ್ವಜನಿಕರು ಓಡಾಡಲು ಕಷ್ಟಪಡುತ್ತಿರುವ ದೃಶ್ಯ
ನಗರದ ನಾಗರಬಾವಿ ಒಂದನೇ ಹಂತ ಸುಮ್ಮನಹಳ್ಳಿ ಬಳಿ ರಸ್ತೆ ಹಾಳಾಗಿತ್ತು ಸಾರ್ವಜನಿಕರು ಓಡಾಡಲು ಕಷ್ಟಪಡುತ್ತಿರುವ ದೃಶ್ಯ   
""

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿರುವ ಬೆಂಗಳೂರು ನಗರಕ್ಕೆ ರಸ್ತೆ ಗುಂಡಿ ಮುಚ್ಚುವ ತಂತ್ರಜ್ಞಾನ ಮಾತ್ರ ಇನ್ನೂ ಸಿದ್ಧಿಸಿಯೇ ಇಲ್ಲ. ಗಲ್ಲಿ ಗಲ್ಲಿಯ ರಸ್ತೆಗಳು ಮಾತ್ರವಲ್ಲ ಇಲ್ಲಿನ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ ಬಾಯ್ದೆರೆದಿರುವ ಗುಂಡಿಗಳು ‘ಸಿಲಿಕಾನ್‌ ಸಿಟಿ’ಯ ಹಿರಿಮೆಯನ್ನು ಅಣಕಿಸುತ್ತಿವೆ.

ರಸ್ತೆ ಗುಂಡಿಗಳನ್ನು ಮುಚ್ಚಲೆಂದೇ ಪ್ರತಿ ವರ್ಷವೂ ಪಾಲಿಕೆ ₹ 40 ಕೋಟಿಯನ್ನು ಕಾಯ್ದಿರಿಸುತ್ತದೆ. ರಸ್ತೆ ಗುಂಡಿ ಕಾಣಿಸಿಕೊಂಡ ತಕ್ಷಣವೇ ಮುಚ್ಚುವುದಕ್ಕೆ ಯಾವುದೇ ಅಡ್ಡಿಯೂ ಇಲ್ಲ. ಏಕೆಂದರೆ ಈ ಕಾಮಗಾರಿಗೆ ಕೆಟಿಪಿಪಿ ಕಾಯದೆಯ ಅಡಿ 4ಜಿ ವಿನಾಯಿತಿಯೂ ಇರುತ್ತದೆ. ಈ ಬಾರಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿ ₹ 7.5 ಕೋಟಿ ವೆಚ್ಚದಲ್ಲಿ ಸ್ವಂತ ಬಿಸಿ ಡಾಂಬರು ಮಿಶ್ರಣ ಘಟಕವನ್ನೂ ಆರಂಭಿಸಿದೆ. ಇದರಲ್ಲಿ ಗಂಟೆಗೆ 120 ಟನ್‌ನಂತೆ 10 ಗಂಟೆಗಳಲ್ಲಿ 50 ಟ್ರಕ್‌ಗಳಷ್ಟು 160 ಡಿಗ್ರಿ ಉಷ್ಣಾಂಶದ ಹಾಟ್‌ ಮಿಕ್ಸ್‌ ಸಿದ್ಧಪಡಿಸಬಹುದು. ಮನಸ್ಸು ಮಾಡಿದರೆ ಒಂದೇ ವಾರದಲ್ಲಿ ನಗರದ ಅಷ್ಟೂ ರಸ್ತೆಗಳ ಗುಂಡಿಗಳನ್ನು ಮುಚ್ಚಬಹುದು. ಇಷ್ಟೆಲ್ಲ ಸೌಕರ್ಯಗಳಿದ್ದರೂ ರಸ್ತೆಯಲ್ಲಿ ಗುಂಡಿಗಳು ಮಾತ್ರ ಹಾಗೆಯೇ ಇವೆ.

ಬಿಸಿ ಡಾಂಬರು ಮಿಶ್ರಣ ಘಟಕ ಕಾರ್ಯಾರಂಭ ಮಾಡಿ ಈಗಾಗಲೇ ಮೂರು ತಿಂಗಳುಗಳು ಕಳೆದಿವೆ. ಈ ಘಟಕ ಆರಂಭವಾದಾಗ ಇನ್ನು 15 ದಿನಗಳಲ್ಲಿ ಮುಖ್ಯ ರಸ್ತೆಗಳ ಎಲ್ಲ ಗುಂಡಿಗಳನ್ನು ಮುಚ್ಚಿಸಲಾಗುತ್ತದೆ ಎಂದು ಬಿಬಿಎಂಪಿ ಹೇಳಿತ್ತು. ಆದರೆ, ಮುಖ್ಯ ರಸ್ತೆಗಳಲ್ಲಿ ಬಾಯ್ದೆರೆದ ಗುಂಡಿಗಳಿಗೂ ಇನ್ನೂ ಮುಕ್ತಿ ಸಿಕ್ಕಿಲ್ಲ.

ADVERTISEMENT

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ಹಾಗೂ ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು ಪದೇ ಪದೇ ಸಭೆ ಮಾಡಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಗಡುವುಗಳ ಮೇಲೆ ಗಡುವುಗಳನ್ನು ವಿಧಿಸುತ್ತಲೇ ಇದ್ದರೂ ರಸ್ತೆ ಮೂಲ ಸೌಕರ್ಯ ವಿಭಾಗ ಹಾಗೂ ವಾರ್ಡ್‌ ಮಟ್ಟದ ರಸ್ತೆಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಎಂಜಿನಿಯರ್‌ಗಳು ತಲೆಯನ್ನೇ ಕೆಡಿಸಿಕೊಂಡಿಲ್ಲ.

ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜಧಾನಿಯ ರಸ್ತೆಗಳ ಅವ್ಯವಸ್ಥೆ ಕಂಡು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಎಚ್ಚೆತ್ತ ಬಿಬಿಎಂಪಿ ರಸ್ತೆ ಗುಂಡಿ ಮುಚ್ಚುವುದಕ್ಕೆ 31 ತಂಡಗಳನ್ನು ರಚಿಸಿದೆ.

‘ಮುಖ್ಯ ರಸ್ತೆಗಳಲ್ಲಿನ ಗುಂಡಿ ಮುಚ್ಚಲು 10 ತಂಡಗಳು, ಕೇಂದ್ರ ಪ್ರದೇಶದ ಮೂರು ವಲಯಗಳಲ್ಲಿನ ರಸ್ತೆ ಗುಂಡಿ ಮುಚ್ಚಲು ಆರು ತಂಡಗಳು ಹಾಗೂ ಹೊರ ಪ್ರದೇಶದ ಐದು ವಲಯಗಳಲ್ಲಿ ತಲಾ ಮೂರು ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ 25 ಕಾರ್ಮಿಕರು ಇರುತ್ತಾರೆ. ಪಾಲಿಕೆಯ ಡಾಂಬರು ಮಿಶ್ರಣ ಘಟಕದಿಂದ ರಸ್ತೆ ಗುಂಡಿ ಮುಚ್ಚಲೆಂದೇ ನಿತ್ಯ 31 ಲೋಡ್‌ಗಳಷ್ಟು ಬಿಸಿ ಡಾಂಬರು ಮಿಶ್ರಣ ಪೂರೈಸಲು ಸೂಚಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಗುತ್ತಿಗೆ ಪಡೆದವರ ವಿರುದ್ಧ ಕ್ರಮ ಏಕಿಲ್ಲ?

ಕಣ್ಣೂರಿನ ಬಿಸಿ ಡಾಂಬರು ಮಿಶ್ರಣ ಘಟಕ ನಿರ್ವಹಣೆಯ ಗುತ್ತಿಗೆಯನ್ನು ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ಸಂಸ್ಥೆಗೆ ಜಲ್ಲಿ ಡಾಂಬರು ಮಿಶ್ರಣಕ್ಕೆ ಪ್ರತಿ ಕ್ಯೂಬಿಕ್‌ ಮೀಟರ್‌ಗೆ ₹ 5 ಸಾವಿರ ಪಾವತಿಸುತ್ತದೆ. ಟೆಂಡರ್‌ ಷರತ್ತಿನ ಪ್ರಕಾರ ಘಟಕದಲ್ಲಿ ಜಲ್ಲಿ ಹಾಗೂ ಬಿಸಿ ಡಾಂಬರು ಮಿಶ್ರ ಮಾಡಿ ಅದನ್ನು ತಂದು ವೈಜ್ಞಾನಿಕ ರೀತಿಯಲ್ಲಿ ರಸ್ತೆ ಗುಂಡಿ ಮುಚ್ಚುವುದು ಈ ಗುತ್ತಿಗೆದಾರರ ಜವಾಬ್ದಾರಿ. ಆದರೆ, ಸಂಸ್ಥೆ ಈ ಹೊಣೆ ನಿಭಾಯಿಸಿಲ್ಲ.

ರಸ್ತೆ ಗುಂಡಿ ಮುಚ್ಚಲು ಕಾರ್ಮಿಕರನ್ನು ಪೂರೈಸಲು ಬಿಬಿಎಂಪಿ ಮತ್ತೆ ಟೆಂಡರ್‌ ಕರೆದಿದೆ. ಡಾಂಬರು ಮಿಶ್ರಣ ಘಟಕ ನಡೆಸುವ ಗುತ್ತಿಗೆದಾರರಿಗೆ ನೀಡುವ ಮೊತ್ತದಲ್ಲಿ ಕಡಿತ ಮಾಡಿ, ಅದರ ಹಣವನ್ನು ಈ ತಂಡಗಳಿಗಾಗಿ ಪಾಲಿಕೆ ವಿನಿಯೋಗಿಸಲು ಮುಂದಾಗಿದೆ.

ಗುತ್ತಿಗೆ ಕಾರ್ಮಿಕರನ್ನು ಬಳಸಿ ಗುಂಡಿ ಮುಚ್ಚಲು ಹೆಚ್ಚುವರಿ ಯಂತ್ರಗಳನ್ನು ಒದಗಿಸುವುದು ಯಾರು? ಅದರ ವೆಚ್ಚ ಪಾಲಿಕೆಗೆ ಹೊರೆಯಾಗುವುದಿಲ್ಲವೇ, ಈಗ ಕರೆಯಲಾದ ಟೆಂಡರ್‌ನಲ್ಲಿ ಒಬ್ಬ ಗುತ್ತಿಗೆದಾರ ಒಂದಕ್ಕಿಂತ ಹೆಚ್ಚು ಟೆಂಡರ್‌ಗಳಲ್ಲಿ ಭಾಗವಹಿಸಿ ಅವರ ಬಳಿ ಅಗತ್ಯ ಸಂಖ್ಯೆಯ ಯಂತ್ರಗಳಿಲ್ಲದೇ ಹೋದರೆ ಗುಂಡಿ ಮುಚ್ಚುವ ಕಾರ್ಯ ಮತ್ತೆ ವಿಳಂಬವಾಗುವುದಿಲ್ಲವೇ ಎಂಬ ಪ್ರಶ್ನೆಗಳೂ ಎದುರಾಗಿವೆ.

ಡಾಂಬರು ಮಿಶ್ರಣದ ಮೇಲೆ ಇಲ್ಲ ನಿಗಾ

ಕಣ್ಣೂರು ಘಟಕದಿಂದ ಕಳುಹಿಸಿಕೊಡುವ ಡಾಂಬರು ಮಿಶ್ರಣ ಎಲ್ಲಿಗೆ ರವಾನೆಯಾಯಿತು, ಎಲ್ಲಿ ಬಳಕೆಯಾಯಿತು ಎಂಬುದರ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನೇ ಬಿಬಿಎಂಪಿ ರೂಪಿಸಿಲ್ಲ.

ಇತ್ತೀಚೆಗೆ ಈ ಘಟಕಕ್ಕೆ ಭೇಟಿ ನೀಡಿದ್ದ ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು, ‘ಪ್ರತಿವಲಯಕ್ಕೆ ನಿತ್ಯ ಎಷ್ಟು ಲೋಡ್ ಡಾಂಬರು ಮಿಶ್ರಣವನ್ನು ಕಳುಹಿಸಲಾಗುತ್ತಿದೆ, ಯಾವ ರಸ್ತೆಗಳಲ್ಲಿ ಎಷ್ಟು ಗುಂಡಿಗಳನ್ನು ಮುಚ್ಚಲಾಗಿದೆ, ಇದಕ್ಕೆ ಬಳಸುವ ಸಾಮಗ್ರಿಗಳ ಗುಣಮಟ್ಟ ಮತ್ತು ಪ್ರಮಾಣ ಎಷ್ಟು, ಎಂಜಿನಿಯರ್‌ಗಳು ಸಲ್ಲಿಸಿರುವ ಬೇಡಿಕೆ ಎಷ್ಟು‘ ಎಂಬ ವಿವರಗಳನ್ನು ಕೇಳಿದಾಗ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದರು.

‘ನಿತ್ಯವೂ ಘಟಕದಿಂದ ಹೊರಗೆ ಕಳುಹಿಸುವ ಮಿಶ್ರಣವನ್ನು ಟ್ರಕ್‌ನ ತೂಕದ ಆಧಾರದಲ್ಲಿ ನಮೂದಿಸಿ ನಿರ್ವಹಣೆ ಮಾಡಬೇಕು. ಯಾವ ಟ್ರಕ್ ಎಲ್ಲಿಗೆ ಹೋಗುತ್ತಿದೆ, ಎಷ್ಟು ಗುಂಡಿಗಳನ್ನು ಮುಚ್ಚಲಾಗಿದೆ ಎಂಬ ಕ್ಷಣ ಕ್ಷಣದ ಮಾಹಿತಿ ನನಗೆ, ಆಯುಕ್ತರಿಗೆ, ಎಲ್ಲಾ ವಲಯಗಳ ವಿಶೇಷ ಆಯುಕ್ತರಿಗೆ, ಜಂಟಿ ಆಯುಕ್ತರಿಗೆ, ಪ್ರಧಾನ ಎಂಜಿನಿಯರ್‌ಗೆ, ಮತ್ತು ಮುಖ್ಯ ಎಂಜಿನಿಯರ್‌ಗಳಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗಬೇಕು‘ ಎಂದು ಆಡಳಿತಾಧಿಕಾರಿ ಸೂಚನೆ ನೀಡಿದ್ದರು. ಈ ಸಲುವಾಗಿ ಆನ್‌ಲೈನ್‌ ವ್ಯವಸ್ಥೆಗೆ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ.

ಕಣ್ಮರೆಯಾಗಿದೆ ಪೈಥಾನ್

ಬಿಬಿಎಂಪಿಯು ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿಯೇ ಎರಡು ಪೈಥಾನ್‌ ಯಂತ್ರಗಳನ್ನು ಖರೀದಿಸಿದೆ. ಈ ಯಂತ್ರಗಳು ಗುಂಡಿ ಮುಚ್ಚಿದ್ದಕ್ಕೆ ಪ್ರತಿ ಕಿ.ಮೀಗೆ ₹ 1.12 ಲಕ್ಷ ಮೊತ್ತವನ್ನು ಪಾಲಿಕೆ ನೀಡುತ್ತದೆ.

‘ಈ ಯಂತ್ರವು ದಿನವೊಂದಕ್ಕೆ ಸರಾಸರಿ 150 ಗುಂಡಿಗಳನ್ನು ಮುಚ್ಚುವ ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ ಬಿಬಿಎಂಪಿ ಎಂಜಿನಿಯರ್‌ಗಳು. ಇದು ನಿಜವೇ ಆಗಿದ್ದರೆ, ನಗರದ ರಸ್ತೆಗಳ ಪರಿಸ್ಥಿತಿ ಈ ರೀತಿ ಇರಲು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆ. ಪೈಥಾನ್‌ ಯಂತ್ರದಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಇತ್ತೀಚೆಗಂತೂ ಎಲ್ಲೂ ಕಾಣ ಸಿಗುತ್ತಿಲ್ಲ.

ಮರೆತರೆ ದಂಡ

ರಸ್ತೆ ಗುಂಡಿಯನ್ನು ವೈಜ್ಞಾನಿಕ ರೀತಿಯಲ್ಲಿ ಮುಚ್ಚಲು ಕ್ರಮ ಕೈಗೊಳ್ಳದ 10 ಎಂಜಿನಿಯರ್‌ಗಳಿಗೆ ಬಿಬಿಎಂಪಿ ಕಳೆದ ವರ್ಷ
₹ 1ಸಾವಿರದಿಂದ ₹ 3 ಸಾವಿರದವರೆಗೆ ದಂಡ ವಿಧಿಸಿತ್ತು. ಗುತ್ತಿಗೆದಾರರ ವಿ ರುದ್ಧವೂ ಕ್ರಮ ಕೈಗೊಂಡಿತ್ತು. ಆದರೆ, ಈ ಪರಿಪಾಠ ಇತ್ತೀಚೆಗೆ ನಿಂತೇ ಹೋಗಿದೆ. ಎಂಜಿನಿಯರ್‌ಗಳು ರಸ್ತೆ ಗುಂಡಿ ಮುಚ್ಚುವುದನ್ನು ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ಇದು ಕೂಡಾ ಕಾರಣ.

ಗುಂಡಿ ಮುಚ್ಚಲು ಗಡುವು

‘ಎಲ್ಲ ಮುಖ್ಯ ರಸ್ತೆಗಳ ಗುಂಡಿಯನ್ನು ನ.15ರ ಒಳಗೆ ಹಾಗೂ ವಾರ್ಡ್‌ ಮಟ್ಟದ ರಸ್ತೆಗಳ ಗುಂಡಿಯನ್ನು ನ.30ರ ಒಳಗೆ ಮುಚ್ಚಬೇಕು ಎಂದು ಗಡುವು ವಿಧಿಸಿದ್ದೇನೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವಲಯದ ಮುಖ್ಯ ಎಂಜಿನಿಯರ್‌ಗಳಿಗೆ ಗುರಿ ನಿಗದಿಪಡಿಸಲಾಗಿದೆ. ರಸ್ತೆ ಮೂಲಸೌಕರ್ಯ ವಿಭಾದದ ಮುಖ್ಯ ಎಂಜಿನಿಯರ್‌ ಈ ವಿಚಾರದಲ್ಲಿ ಸಮನ್ವಯ ನೋಡಿಕೊಳ್ಳಬೇಕು. ನಿತ್ಯದ ಬೆಳವಣಿಗೆ ಬಗ್ಗೆ ವರದಿ ಒಪ್ಪಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದರು.

ನಗರದ ಬಹುತೇಕ ರಸ್ತೆಗಳು ಗುಂಡಿಮಯಗಳಾಗಿವೆ. ಈ ಗುಂಡಿಗಳಿಂದಾಗಿ ವಾಹನ ಸವಾರರು ಪಡಿಪಾಟಲು ಅನುಭವಿಸುವಂತಾಗಿದೆ. ಓದುಗರು ಗುಂಡಿಗಳ ಚಿತ್ರಗಳನ್ನು ಕಳುಹಿಸಬಹುದು. ಈ ಚಿತ್ರಗಳನ್ನು ವಾಟ್ಸ್‌ ಆ್ಯಪ್‌ ಮಾಡಿ

9606038256

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.