ADVERTISEMENT

ಬ್ರೆಜಿಲ್‌ ಗೌರವ ರಾಯಭಾರ ಕಚೇರಿ ಆರಂಭ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 19:39 IST
Last Updated 20 ಸೆಪ್ಟೆಂಬರ್ 2019, 19:39 IST
ಬೆಂಗಳೂರಿನಲ್ಲಿ ಬ್ರೆಜಿಲ್‌ನ ಗೌರವ ರಾಯಭಾರ ಕಚೇರಿಯನ್ನು ತೆರೆದ ಬಗ್ಗೆ ಮಾಹಿತಿ ನೀಡಿದ ರಾಯಭಾರಿ ಆಂಡ್ರೆ ಅರಾನ್ಹಾ ಕೊರೆಯಾ ಡೊ ಲಾಗೊ (ಎಡ) ಹಾಗೂ ಗೌರವ ರಾಯಭಾರಿ ಅಪ್ಪಾರಾವ್ ಮಲ್ಲವರಪರು  – ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಬ್ರೆಜಿಲ್‌ನ ಗೌರವ ರಾಯಭಾರ ಕಚೇರಿಯನ್ನು ತೆರೆದ ಬಗ್ಗೆ ಮಾಹಿತಿ ನೀಡಿದ ರಾಯಭಾರಿ ಆಂಡ್ರೆ ಅರಾನ್ಹಾ ಕೊರೆಯಾ ಡೊ ಲಾಗೊ (ಎಡ) ಹಾಗೂ ಗೌರವ ರಾಯಭಾರಿ ಅಪ್ಪಾರಾವ್ ಮಲ್ಲವರಪರು  – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬ್ರೆಜಿಲ್‌ನ ಗೌರವ ರಾಯಭಾರ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆಯಲಾಗಿದ್ದು, ಖ್ಯಾತ ಉದ್ಯಮಿ ಅಪ್ಪಾರಾವ್ ಮಲ್ಲವರಪರು ಅವರನ್ನು ಗೌರವ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.

‘ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಜಗತ್ತಿನ ಗಮನ ಸೆಳೆದಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಉದ್ಯಮಿಗಳಿರುವ 10 ಮೆಟ್ರೊಪಾಲಿಟನ್‌ ನಗರಗಳಲ್ಲಿ ಬೆಂಗಳೂರು ಸಹ ಒಂದು ಎಂಬ ಹೆಗ್ಗಳಿಕೆ ಗಳಿಸಿಕೊಂಡಿದೆ. ಹೀಗಾಗಿ ಬ್ರೆಜಿಲ್‌ನ ಗೌರವ ರಾಯಭಾರ ಕಚೇರಿಯನ್ನು ಇಲ್ಲಿ ತೆರೆಯಲಾಗಿದೆ. ಎರಡೂ ದೇಶಗಳ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧ ಉತ್ತೇಜಿಸುವ ನಿಟ್ಟಿನಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ’ ಎಂದು ಭಾರತದಲ್ಲಿರುವ ಬ್ರೆಜಿಲ್‌ನ ರಾಯಭಾರಿ ಆಂಡ್ರೆ ಅರಾನ್ಹಾ ಕೊರೆಯಾ ಡೊ ಲಾಗೊ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಭಾರತ ಮತ್ತು ಬ್ರೆಜಿಲ್‌ಗಳು ಬಹುತೇಕ ಒಂದೇ ರೀತಿಯ ಭೌಗೋಳಿಕ ಮತ್ತು ಆರ್ಥಿಕ ಸ್ಥಿತಿಯನ್ನು ಹೊಂದಿವೆ. ಭಾರತ ಕಳೆದ 5 ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಆರ್ಥಿಕ ಶಕ್ತಿ ವೃದ್ಧಿಸಿಕೊಂಡು ಜಗತ್ತಿನ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಬ್ರೆಜಿಲ್‌ 6–7ರ ಸ್ಥಾನದಲ್ಲಿದೆ. ಬಾಹ್ಯಾಕಾಶ ತಂತ್ರಜ್ಞಾನ, ವಿಮಾನಯಾನ ಉದ್ಯಮ, ಶೈಕ್ಷಣಿಕ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ವಿಪುಲ ಅವಕಾಶ ಇದೆ’ . ಎಂದು ಹೇಳಿದರು.

ADVERTISEMENT

ಕೋಲ್ಕತ್ತ ಮತ್ತು ಹೈದರಾಬಾದ್‌ಗಳಲ್ಲಿ ಈಗಾಗಲೇ ಗೌರವ ರಾಯಭಾರ ಕಚೇರಿಗಳಿದ್ದು, ಬೆಂಗಳೂರಿನ ಕಚೇರಿ ಮೂರನೆಯದು. ಬ್ರೆಜಿಲ್‌ನ ರಾಯಭಾರ ಕಚೇರಿ ದೆಹಲಿಯಲ್ಲಿದ್ದರೆ, ಮುಂಬೈಯಲ್ಲಿ ಕಾನ್ಸುಲೇಟ್‌ ಕಚೇರಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.