ADVERTISEMENT

‘ಸುರಕ್ಷಿತ ಚಾಲನೆಗಾಗಿ ಲೋಕೊಪೈಲಟ್‌ಗಳ ಉಸಿರು ಪರೀಕ್ಷೆ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 17:37 IST
Last Updated 19 ಏಪ್ರಿಲ್ 2025, 17:37 IST
ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ‘ಸಂಯೋಜಿತ ಸಿಬ್ಬಂದಿ ಲಾಬಿ’ ಮಷಿನ್‌ನಲ್ಲಿ ಸೈನ್‌ ಇನ್‌ ಆಗುತ್ತಿರುವ ಲೊಕೊಪೈಲಟ್‌
ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ‘ಸಂಯೋಜಿತ ಸಿಬ್ಬಂದಿ ಲಾಬಿ’ ಮಷಿನ್‌ನಲ್ಲಿ ಸೈನ್‌ ಇನ್‌ ಆಗುತ್ತಿರುವ ಲೊಕೊಪೈಲಟ್‌   

ಬೆಂಗಳೂರು: 'ರೈಲುಗಳ ಲೋಕೊಪೈಲಟ್‌ (ಚಾಲಕರು) ಮತ್ತು ರೈಲು ನಿರ್ವಾಹಕರು ಮತ್ತು ರೈಲು ಸಹಾಯಕ ಸಿಬ್ಬಂದಿ ಮಾದಕ ದ್ರವ್ಯ ಸೇವಿಸಿ ಕಾರ್ಯನಿರ್ವಹಿಸಬಾರದು. ಆರೋಗ್ಯ ಸರಿ ಇಲ್ಲದಾಗ ಕೆಲಸ ಮಾಡಬಾರದು ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಹಾಜರಾಗುವ ಮೊದಲು ಉಸಿರು ತಪಾಸಣೆಯನ್ನು ಮಾಡಲಾಗುತ್ತಿದೆ’ ಎಂದು ಬೆಂಗಳೂರು ವಿಭಾಗೀಯ ಎಲೆಕ್ಟ್ರಿಕಲ್‌ ಎಂಜಿನಿಯರ್‌ (ಟ್ರಾಕ್ಸನ್‌ ಆಪರೇಶನ್‌) ಶಿವನಂಜಪ್ಪ ತಿಳಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು.

ಮನುಷ್ಯನ ತಪ್ಪಿನಿಂದ ರೈಲಿನಲ್ಲಿ ಯಾವುದೇ ಅವಘಡ ಉಂಟಾಗಬಾರದು ಎಂಬ ಕಾರಣಕ್ಕೆ ಸಿಬ್ಬಂದಿಯ ಸುರಕ್ಷತೆಗೆ ಹೆಚ್ಚಿನ ಗಮನಕೊಡಲಾಗುತ್ತಿದೆ. ಯಾವುದೇ ರೈಲಿಗೆ ಲೋಕೊಪೈಲಟ್‌ ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ 16 ತಾಸುಗಳ ಮೊದಲು ಮಾಹಿತಿ ನೀಡಲಾಗುತ್ತದೆ. ಪ್ರತಿ ವಾರಕ್ಕೆ ಕನಿಷ್ಠ 30 ತಾಸು ವಿಶ್ರಾಂತಿ ನೀಡಲಾಗುತ್ತದೆ. ಪ್ರತಿ ಬಾರಿ ಕರ್ತವ್ಯಕ್ಕೆ ಹಾಜರಾಗುವಾಗ ‘ಸಂಯೋಜಿತ ಲಾಬಿ’ಯಲ್ಲಿ ಬೆರಳಚ್ಚು ನೀಡಿ, ಉಸಿರು ತಪಾಸಣೆ ನಂತರ ಅವರ ಫೋಟೊವನ್ನು ಕಂಪ್ಯೂಟರ್‌ ಸೆರೆ ಹಿಡಿಯುತ್ತದೆ. ತಾಂತ್ರಿಕ ಸುತ್ತೋಲೆ ಓದಿದ ಮೇಲಷ್ಟೇ ಕೆಲಸಕ್ಕೆ ಹಾಜರಾಗಬಹುದು. ಉಸಿರಿನಲ್ಲಿ ಶೇ 1ರಷ್ಟು ತೊಂದರೆ ಇದ್ದರೂ ಸೈನ್‌ ಇನ್‌ ಆಗುವುದಿಲ್ಲ ಎಂದು ತಿಳಿಸಿದರು.

ADVERTISEMENT

ರೈಲು ಸಂಚಾರ ಸಿಬ್ಬಂದಿಗೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮೂಲ ನಿಲ್ದಾಣದಿಂದ ದೂರ ಇರುವ ನಿಲ್ದಾಣಗಳಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕನಿಷ್ಠ 8 ಗಂಟೆ ವಿಶ್ರಾಂತಿ ತೆಗೆದುಕೊಳ್ಳಬಹುದು. ರಿಯಾಯಿತಿ ದರದಲ್ಲಿ ಪೌಷ್ಟಿಕ ಆಹಾರ ಒದಗಿಸಲಾಗುತ್ತದೆ. ಯೋಗ, ವ್ಯಾಯಾಮ ಕೊಠಡಿಗಳು, ಚೆಸ್‌, ಕೇರಂನಂಥ ಒಳಾಂಗಣ ಆಟಕ್ಕೆ ಅವಕಾಶಗಳನ್ನು ನೀಡಲಾಗಿದೆ ಎಂದರು.

ಕೆ.ಎಸ್. ಆರ್ ಬೆಂಗಳೂರು, ಎಸ್‌.ಎಂ.ವಿ.ಟಿ ಬೆಂಗಳೂರು, ಯಶವಂತಪುರ ಮತ್ತು ಬಂಗಾರಪೇಟೆ ರೈಲು ನಿಲ್ದಾಣಗಳಲ್ಲಿ ಒಟ್ಟು 191 ವಸತಿ ಸೌಕರ್ಯಗಳ ಕೊಠಡಿಗಳಿವೆ. ಶುದ್ಧ ಕುಡಿಯುವ ನೀರು, ಕಾಲು ಮಸಾಜ್ ಮಾಡುವ ಮಷಿನ್, ವಸತಿ ಕಟ್ಟಡದ ನಡುವೆಯೇ ಉದ್ಯಾನಗಳೂ ಇವೆ ಎಂದು ವಿವರಿಸಿದರು.

ಸಾರ್ವಜನಿಕ ಸಂಪರ್ಕ ಅಧಿಕಾರಿ‌ ಪ್ರಾಣೇಶ್ ಕೆ.ಎನ್‌. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.