ADVERTISEMENT

ಇತಿಹಾಸದಲ್ಲಿ ಬಿಟ್ಟುಹೋದ ಘಟನೆ ದಾಖಲಿಸಿ: ಸಿಎಂ ಬಿ.ಎಸ್. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:06 IST
Last Updated 9 ನವೆಂಬರ್ 2019, 19:06 IST
ಗುಡ್ಡೆಮನೆ ಅಪ್ಪಯ್ಯ ಗೌಡರಿಗೆ ಸಂಬಂಧಿಸಿದ ಶಸ್ತ್ರಾಸ್ತ್ರಗಳನ್ನು ಅನಾವರಣ ಮಾಡಿದ ಬಿ.ಎಸ್.ಯಡಿಯೂರಪ್ಪ, ಖಡ್ಗ ಪ್ರದರ್ಶಿಸಿದರು. ಶೋಭಾ ಕರಂದ್ಲಾಜೆ, ನಿರ್ಮಲಾನಂದನಾಥ ಸ್ವಾಮೀಜಿ, ‌ಡಿ.ವಿ.ಸದಾನಂದ ಗೌಡ ಹಾಗೂ ಸಚಿವ ಆರ್‌.ಅಶೋಕ ಇದ್ದರು - ಪ್ರಜಾವಾಣಿ ಚಿತ್ರ
ಗುಡ್ಡೆಮನೆ ಅಪ್ಪಯ್ಯ ಗೌಡರಿಗೆ ಸಂಬಂಧಿಸಿದ ಶಸ್ತ್ರಾಸ್ತ್ರಗಳನ್ನು ಅನಾವರಣ ಮಾಡಿದ ಬಿ.ಎಸ್.ಯಡಿಯೂರಪ್ಪ, ಖಡ್ಗ ಪ್ರದರ್ಶಿಸಿದರು. ಶೋಭಾ ಕರಂದ್ಲಾಜೆ, ನಿರ್ಮಲಾನಂದನಾಥ ಸ್ವಾಮೀಜಿ, ‌ಡಿ.ವಿ.ಸದಾನಂದ ಗೌಡ ಹಾಗೂ ಸಚಿವ ಆರ್‌.ಅಶೋಕ ಇದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತೀಯ ಇತಿಹಾಸದಲ್ಲಿ ಹಲವು ಪ್ರಮುಖ ಘಟನೆಗಳು ಬಿಟ್ಟು ಹೋಗಿವೆ. ಬ್ರಿಟಿಷರ ವಿರುದ್ಧ ನಾಡಿನಲ್ಲಿ ನಡೆದ ಅಮರ ಸುಳ್ಯದ ಕ್ರಾಂತಿ ಸೇರಿದಂತೆ ವಿವಿಧ ಘಟನೆಗಳನ್ನು ಇತಿಹಾಸದಲ್ಲಿ ದಾಖಲಿಸುವ ಕೆಲಸವಾಗಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಮತ ವ್ಯಕ್ತಪಡಿಸಿದರು.

ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಅಮರ ಸುಳ್ಯ ಸಮರ –1837’ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ, ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಹಲವರ ಬಲಿದಾನವಾಗಿದೆ. ಕೆಲವರು ಮಾತ್ರ ಇತಿಹಾಸದ ಪುಟಗಳನ್ನು ಸೇರಿದ್ದಾರೆ. ಇನ್ನುಳಿದವರ ಬಗ್ಗೆ ಕೂಡಾ ಅಧ್ಯಯನ ನಡೆಸಿ, ಇತಿಹಾಸದಲ್ಲಿ ದಾಖಲಿಸುವ ಕೆಲಸವಾಗಬೇಕು’ ಎಂದರು.

ADVERTISEMENT

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ‘ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ವರ್ಷದಲ್ಲಿ ಒಮ್ಮೆ ನೆನಪಿಸಿಕೊಂಡು ಸುಮ್ಮನಾಗುತ್ತೇವೆ. ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳದಿರುವುದು ನಮ್ಮ ದುರಂತ. ಸ್ವಾತಂತ್ರ್ಯ ಬಳಿಕ ದೇಶ ಅಭಿವೃದ್ಧಿಯಾಗುತ್ತಿದೆ. ಆದರೆ, ಅದರ ಹಿಂದಿನ ಪರಿಕಲ್ಪನೆ ಮಾತ್ರ ಮುನ್ನೆಲೆಗೆ ಬಂದಿಲ್ಲ. ಚರಿತ್ರೆಯಲ್ಲಿ ಸೇರದಿದ್ದವರನ್ನು ಸೇರಿಸುವುದು ನಮ್ಮ ಜವಾಬ್ದಾರಿ’ ಎಂದು ಭರವಸೆ ನೀಡಿದರು.

‘ಮಡಿಕೇರಿಯಲ್ಲಿ ಕೂಡಾಗುಡ್ಡೆಮನೆ ಅಪ್ಪಯ್ಯ ಗೌಡ ಕುರಿತು ಕಾರ್ಯಾಗಾರ ಮಾಡಬೇಕು’ ಎಂದರು.

ಸಂಸದೆ ಶೋಭಾಶೋಭಾ ಕರಂದ್ಲಾಜೆ, ‘ಸ್ವಾತಂತ್ರ್ಯ ಹೋರಾಟ ಎಂದಾಕ್ಷಣ ಉತ್ತರ ಭಾರತದ ರಾಜ್ಯಗಳು ನೆನಪಿಗೆ ಬರುತ್ತವೆ. ನಮ್ಮವರು ಕೂಡಾ ಸಾಕಷ್ಟು ಕೊಡುಗೆ ನೀಡಿದ್ದರು. ಅದು ಹೊರಪ್ರಪಂಚಕ್ಕೆ ತಿಳಿಯಲಿಲ್ಲ. ಸಂಗೊಳ್ಳಿ ರಾಯಣ್ಣ ಕುರಿತು ಚಲನಚಿತ್ರ ಬಂದಾಗ ಮಾತ್ರ ಅವರ ಬಗ್ಗೆ ಇಡೀ ದೇಶದ ಜನರು ಕುತೂಹಲದಿಂದ ತಿಳಿದುಕೊಂಡರು’ ಎಂದರು.

**
ಸ್ವಾತಂತ್ರ್ಯ ಸಂಗ್ರಾಮಕ್ಕೂ 20 ವರ್ಷ ಮೊದಲೇ ಅದರ ಕಿಚ್ಚನ್ನು ನಮ್ಮವರು ಹತ್ತಿಸಿದ್ದರು. ಆದರೆ, ಈ ಬಗ್ಗೆ ಸೂಕ್ತ ಅಧ್ಯಯನಗಳು ನಡೆದಿರಲಿಲ್ಲ.
-ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.