ADVERTISEMENT

ಗುತ್ತಿಗೆ ನೌಕರರ ನಿರಾಕರಣೆ ಸಲ್ಲ: ಬಿಎಸ್‌ಎನ್‌ಎಲ್‌ಗೆ ಹೈಕೋರ್ಟ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 18:37 IST
Last Updated 15 ನವೆಂಬರ್ 2018, 18:37 IST

ಬೆಂಗಳೂರು: ‘ಭಾರತ ಸಂಚಾರ ನಿಗಮ ಲಿಮಿಟೆಡ್‌ ಕಂಪನಿಯ (ಬಿಎಸ್‌ಎನ್‌ಎಲ್‌) ಗುತ್ತಿಗೆ ಕಾರ್ಮಿಕರ ಉಸ್ತುವಾರಿಗಳು ಯಾವ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಬಿಎಸ್‌ಎನ್‌ಎಲ್‌ಗೆ ಸೂಚಿಸುತ್ತಾರೆಯೊ ಅಂತಹ ನೌಕರರಿಗೆ ಆಡಳಿತ ಮಂಡಳಿಯು ಕೆಲಸ ನಿರಾಕರಿಸುವಂತಿಲ್ಲ’ ಎಂದು ಬಿಎಸ್‌ಎನ್‌ಎಲ್‌ ಅಧ್ಯಕ್ಷರು ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ಬಿಎಸ್‌ಎನ್‌ಎಲ್‌ ಗುತ್ತಿಗೆ ನೌಕರರ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

ಪ್ರಕರಣವೇನು?: ಮೈಸೂರು ವಲಯದ ಬಿಎಸ್‌ಎನ್ಎಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಶಬರೀಶ ಕುಮಾರ, ಮಾದೇಶ, ವಿ.ಶಿವಕುಮಾರ, ಮೊಹಮದ್‌ ಅಲಿ ಮತ್ತು ಸಿ.ಎಸ್‌ ಚಂದ್ರಾ, ‘ನಾವು ಬ್ರಾಡ್‌ಬ್ಯಾಂಡ್‌, ಟವರ್‌, ಎಕ್ಸ್‌ಚೇಂಚ್‌ ನಿರ್ವಹಣೆ, ದೋಷ ಸರಿಪಡಿಸುವಿಕೆ ಸೇರಿದಂತೆ ನೆಟ್‌ವರ್ಕ್‌ಗೆ ಸಂಬಂಧಿಸಿದ ಎಲ್ಲಾ ಕೆಲಸ ಮಾಡುತ್ತೇವೆ. ಆದ್ದರಿಂದ ನಮ್ಮನ್ನು ಕುಶಲ ಕಾರ್ಮಿಕರೆಂದು ಪರಿಗಣಿಸಬೇಕು. ಅಂತೆಯೇ ಕುಶಲ ಕಾರ್ಮಿಕರಲ್ಲದವರಿಗೆ ನೀಡಲಾಗುತ್ತಿರುವ ವೇತನವನ್ನು ಬದಲಾಯಿಸಬೇಕು’ ಎಂದು ಕೋರಿದ್ದರು.

ADVERTISEMENT

ಈ ಕುರಿತಂತೆ ಕೇಂದ್ರ ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಮನವಿ ಇನ್ನೂ ವಿಚಾರಣೆಯ ಹಂತದಲ್ಲಿದೆ. ಏತನ್ಮಧ್ಯೆ ಮನವಿ ಸಲ್ಲಿಸಿದ್ದ ಐವರೂ ಅರ್ಜಿದಾರರನ್ನು ಆಡಳಿತ ಮಂಡಳಿ ಸೇವೆಯಿಂದ ತೆಗೆದುಹಾಕಿತ್ತು. ಈ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್‌ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುವಂತಿಲ್ಲ ಎಂದು ಆದೇಶಿಸಿತ್ತು.

ಅರ್ಜಿದಾರರನ್ನು ಉಸ್ತುವಾರಿಗಳು ಪುನಃ ಕೆಲಸಕ್ಕೆ ಕಳುಹಿಸಿದರೂ ಆಡಳಿತ ಮಂಡಳಿ ಸೇರ್ಪಡೆ ಮಾಡಿಕೊಳ್ಳಲು ನಿರಾಕರಿಸಿತ್ತು. ನಿಮ್ಮನ್ನು ಆದಾಗಲೇ ತೆಗೆದುಹಾಕಲಾಗಿದೆ. ಹೈಕೋರ್ಟ್ ಆದೇಶ ಸ್ಪಷ್ಟವಾಗಿಲ್ಲ’ ಎಂದು ಹೇಳಿತ್ತು. ಈ ಕುರಿತಂತೆ ಅರ್ಜಿದಾರರು ಹೈಕೋರ್ಟ್‌ನಲ್ಲಿ ಆದೇಶ ಸ್ಪಷ್ಟನೆಗೆ ಕೋರಿದ್ದರು. ಇದನ್ನು ನ್ಯಾಯಪೀಠ ಈಗ ಮಾನ್ಯ ಮಾಡಿ ಅರ್ಜಿ ವಿಲೇವಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.