ADVERTISEMENT

‘ಘೋಷಣೆ ಬೇಡ, ಸಿಸಿಇಎ ಅನುಮೋದನೆ ಬೇಕು’

ಉಪನಗರ ರೈಲು ಯೋಜನೆ ಬಗ್ಗೆ ಕೇಂದ್ರದ ಬಜೆಟ್‌ನಲ್ಲಿ ಮೂರನೇ ಬಾರಿಗೆ ಪ್ರಸ್ತಾಪ l ರೈಲು ಪ್ರಯಾಣಿಕರು ಮತ್ತು ಹೋರಾಟಗಾರರ ಬೇಸರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 2:27 IST
Last Updated 2 ಫೆಬ್ರುವರಿ 2020, 2:27 IST
   

ಬೆಂಗಳೂರು: ‘ಉಪನಗರ ರೈಲು ಯೋಜನೆ ಬಗ್ಗೆ ಕೇಂದ್ರದ ಬಜೆಟ್‌ನಲ್ಲಿ ಮೂರನೇ ಬಾರಿಗೆ ಪ್ರಸ್ತಾಪವಾಗಿದೆ. ಈ ರೀತಿ ಮಾತಿನಲ್ಲೇ ಕಾಲಹರಣ ಮಾಡದೆ ಈ ಯೋಜನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಅನುಮೋದನೆ ನೀಡಬೇಕು’

ರೈಲು ಪ್ರಯಾಣಿಕರ ಹಾಗೂ ರೈಲ್ವೆ ಹೋರಾಟಗಾರರ ಆಗ್ರಹವಿದು.

2018, 2019ರ ಬಜೆಟ್‌ನಲ್ಲೂ ಪ್ರಸ್ತಾಪಿಸಲಾಗಿತ್ತು. ಆದರೆ, 2019ರ ರೈಲ್ವೆ ಯೋಜನೆಗಳಿಗೆ ಅನುದಾನ ಮಂಜೂರಾದ ವಿವರಗಳನ್ನು ಹೊತ್ತ ‘ಪಿಂಕ್ ಬುಕ್’ನಲ್ಲಿ ₹1 ಕೋಟಿ ಮಾತ್ರ ಹಂಚಿಕೆ ಮಾಡಲಾಗಿತ್ತು. ಈ ನಡುವೆ, 2019ರ ಮೇ ತಿಂಗಳಲ್ಲಿ ‌₹18 ಸಾವಿರ ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ರೈಟ್ಸ್ ಸಂಸ್ಥೆ ಸಿದ್ಧಪಡಿಸಿತ್ತು. ‘ಮೆಟ್ರೊ ರೈಲು ಯೋಜನೆ ಇರುವ ಕಡೆಯೇ ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುವುದು ಬೇಡ’ ಎನ್ನುವ ಮೂಲಕ ಪ್ರಧಾನಮಂತ್ರಿ ಕಚೇರಿ ಉಚಿತವಾಗಿ ಭೂಮಿ ಒದಗಿಸುವ ಒಪ್ಪಂದಕ್ಕೂ ತಗಾದೆ ತೆಗೆದಿತ್ತು.

ADVERTISEMENT

ಬಳಿಕ ರೈಟ್ಸ್ ಸಂಸ್ಥೆಯು ₹16,500 ಕೋಟಿ ಮೊತ್ತದ ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಿತು. ಸದ್ಯ ₹18,600 ಕೋಟಿ ಮೊತ್ತದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ₹2,100 ಕೋಟಿ ಹೆಚ್ಚು ಮೊತ್ತ ಘೋಷಣೆ ಮಾಡಿರುವುದು ಏಕೆ ಎಂಬ ಬಗ್ಗೆ ರೈಲ್ವೆ ಅಧಿಕಾರಿಗಳಿಗೇ ಸ್ಪಷ್ಟತೆ ಇಲ್ಲ. ಸಿಸಿಇಎ ಅನುಮೋದನೆ ದೊರೆತ ನಂತರ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎನ್ನುತ್ತಾರೆ ಅವರು.

ಯೋಜನೆಯ ಅಂದಾಜು ಮೊತ್ತದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ತಲಾ ಶೇ 20ರಷ್ಟು ಬಂಡವಾಳ ಭರಿಸಿ ಮತ್ತು ಶೇ 60ರಷ್ಟನ್ನು ಅನ್ಯಮೂಲದಿಂದ ಪಡೆದು ಅನುಷ್ಠಾನಗೊಳಿಸುವ ಪ್ರಸ್ತಾವನೆಗೆ ಈಗಾಗಲೇ ರೈಲ್ವೆ ಮಂಡಳಿಯ ಅನುಮೋದನೆ ದೊರೆತಿದೆ. ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆ–ರೈಡ್‌) ಕಚೇರಿಯೂ ಆರಂಭವಾಗಿದೆ.

‘ಸದ್ಯಕ್ಕೆ ಅಗತ್ಯ ಇರುವುದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ. ಅದನ್ನು ನೀಡಿದರೆ ಯೋಜನೆ ಕಾರ್ಯಾರಂಭಗೊಳ್ಳಲಿದೆ. ಅದನ್ನು ಬಾಕಿ ಉಳಿಸಿಕೊಂಡು ಬಜೆಟ್‌ನಲ್ಲಿ ಪ್ರಸ್ತಾಪ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಬೆಂಗಳೂರಿಗೆ ಅಗತ್ಯ ಇರುವ ಹೊಸ ಯೋಜನೆಗಳ ಬಗ್ಗೆ ಪ್ರಸ್ತಾಪಿದೇ ಇರುವುದು ನಿರಾಸೆ ತಂದಿದೆ’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಸಂಜೀವ್
ದ್ಯಾಮಣ್ಣನವರ್.

‘ಹಣ ಮೀಸಲಿಡಲಾಗಿದೆಯೇ ಇಲ್ಲವೋ ಎಂಬುದು ಪಿಂಕ್‌ ಬುಕ್‌ನಲ್ಲಿ ಗೊತ್ತಾಗಲಿದೆ’ ಎಂದು ಹೇಳಿದರು.

‘ಹಲವು ವರ್ಷಗಳಿಂದ ಪ್ರಸ್ತಾಪ ಹಂತದಲ್ಲೇ ಇರುವ ಯೋಜನೆಯ ಕಾಮಗಾರಿ ಈ ವರ್ಷ ಆರಂಭವಾಗಲಿದೆ’ ಎಂದು ರೈಲ್ವೆ ಮಂಡಳಿಯ ವಿಶ್ವಾಸ ವ್ಯಕ್ತಪಡಿಸಿದೆ.

‘ಸಂಪುಟ ಸಮಿತಿಗೆ ಬೇಕಿರುವ ಕರಡು ಟಿಪ್ಪಣಿಯು ರೈಲ್ವೆ ಸಚಿವಾಲಯದಿಂದಆರ್ಥಿಕ ಸಚಿವಾಲಯಕ್ಕೆ ಹೋಗಿದೆ. ಶೀಘ್ರವೇಸಿಸಿಇಎ ಅನುಮೋದನೆ ದೊರಕುವ ನಿರೀಕ್ಷೆ ಇದೆ’ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಪ್ರತಿಕ್ರಿಯಿಸಿದರು.

ಮೂರು ವರ್ಷದಿಂದ ಮಾತಲ್ಲೇ ರೈಲು

‘ಉಪನಗರ ರೈಲು ಯೋಜನೆ ಬಗ್ಗೆ ಮೂರು ವರ್ಷಗಳಿಂದ ಮಾತಿನಲ್ಲೇ ಕಾಲಹರಣ ಮಾಡಲಾಗುತ್ತಿದೆ. ಮೊದಲು ಸಿಸಿಇಎ ಅನುಮೋದನೆ ನೀಡಲಿ’ ಎಂದು ಉಪನಗರ ರೈಲು ಹೋರಾಟಗಾರ ಸುಹಾಸ್ ನಾರಾಯಣಮೂರ್ತಿ ಒತ್ತಾಯಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಇದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಸರ್ಕಾರ ಇರುತ್ತಿತ್ತು. ಈಗ ಎರಡೂ ಕಡೆ ಬಿಜೆಪಿ ಸರ್ಕಾರವೇ ಇದೆ. ಈ ಸಂದರ್ಭದಲ್ಲಿ ಒಬ್ಬರ ಮೇಲೊಬ್ಬರು ಗೂಬೆ ಕೂರಿಸಲಾಗದು. ಸಿಸಿಇಎ ಅನುಮೋದನೆಗೆ ಸಂಸದರೆಲ್ಲರೂ ಒಟ್ಟಾಗಿ ಒತ್ತಡ ಹೇರಬೇಕು’ ಎಂದರು.

‘ಕೊನೆಯ ಹೆಜ್ಜೆ ಇಡಲಿ’

‘ಬಹುದಿನಗಳ ಬೇಡಿಕೆಯಾದ ಉಪನಗರ ರೈಲು ಯೋಜನೆ ಕಾಮಗಾರಿ ಆರಂಭಕ್ಕೆ ಒಂದೇ ಹೆಜ್ಜೆ ಬಾಕಿ ಇದೆ. ಸಿಸಿಇಎ ಅನುಮೋದನೆಯನ್ನೂ ಆದಷ್ಟು ಬೇಗ ನೀಡಬೇಕು’ ಎಂದು ರೈಲ್ವೆ ಹೋರಾಟಗಾರ ಆರ್‌. ಅಭಿಷೇಕ್ ಆಗ್ರಹಿಸಿದರು.

‘ಕೆ–ರೈಡ್ ಸಂಸ್ಥೆ ತನ್ನ ಕಾರ್ಯಚಟುವಟಿಕೆಯನ್ನು ಈಗಾಗಲೇ ಆರಂಭಿಸಿದೆ. ಅನುದಾನ ದೊರೆತರೆ ಕಾಮಗಾರಿ ಆರಂಭವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.