ADVERTISEMENT

ಜನ ಎಚ್ಚೆತ್ತುಕೊಳ್ಳದ ಹೊರತು ಉಲ್ಲಂಘನೆ ನಿಲ್ಲದು

ಸಾರ್ವಜನಿಕರ ನಿಷ್ಕ್ರಿಯತೆಯೂ ಸಮಸ್ಯೆ ಉಲ್ಬಣಕ್ಕೆ ಕಾರಣ

ಪ್ರವೀಣ ಕುಮಾರ್ ಪಿ.ವಿ.
Published 17 ಜುಲೈ 2019, 19:47 IST
Last Updated 17 ಜುಲೈ 2019, 19:47 IST
   

ಬೆಂಗಳೂರು: ನಗರದಲ್ಲಿ ನಿಯಮ ಉಲ್ಲಂಘಿಸಿ ಬಹುಮಹಡಿ ಕಟ್ಟಡ ನಿರ್ಮಿಸುವ ಪರಿಪಾಠ ಅವ್ಯಾಹತವಾಗಿರುವುದಕ್ಕೆ ಕಟ್ಟಡ ಮಾಲೀಕರು ಹಾಗೂ ಅಧಿಕಾರಿಗಳಷ್ಟೇ ಹೊಣೆಗಾರರೇ? ಇದಕ್ಕೆ ಕಡಿವಾಣ ಹಾಕಲು ಅವಕಾಶಗಳಿಲ್ಲವೇ?

‘ಖಂಡಿತಾ ಇದೆ’ ಎನ್ನುತ್ತಾರೆ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿರುವ ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಎನ್‌.ಎಸ್‌.ಮುಕುಂದ್‌.

‘ಕಟ್ಟಡ ನಿಯಮ ಉಲ್ಲಂಘನೆ ಹಿಂದಿರುವ ಜಾಲದ ಕಬಂಧಬಾಹುವಿನಿಂದ ಮುಕ್ತಿ ಸಿಗಬೇಕಿದ್ದರೆ ಮೊದಲು ಜನರು ಎಚ್ಚೆತ್ತುಕೊಳ್ಳಬೇಕು. ನಿರ್ಮಾಣ ಹಂತದಲ್ಲೇ ಉಲ್ಲಂಘನೆಯನ್ನು ತಡೆಯಬೇಕು. ಈ ಸಮಸ್ಯೆ ತಡೆಗೆ ಇದೊಂದೇ ಪರಿಹಾರ’ ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ ಅವರು.

ADVERTISEMENT

‘ಬಹುಮಹಡಿ ಕಟ್ಟಡ ನಿರ್ಮಿಸಬೇಕಿದ್ದರೆ, ಅದರ ಸುತ್ತಲೂ ಅಗ್ನಿಶಾಮಕ ವಾಹನ ಹೋಗುವಷ್ಟು ಜಾಗ ಬಿಟ್ಟಿರಲೇಬೇಕು. ಆದರೆ, ನಗರದಲ್ಲಿ ಈ ನಿಯಮ ಪಾಲನೆ ಆಗುವುದೇ ಅಪರೂಪ. ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಅಥವಾ ಅದು ಕುಸಿದು ಬಿದ್ದರೆ ಆಸುಪಾಸಿನ ನಿವಾಸಿಗಳಿಗೂ ಅಪಾಯ ತಪ್ಪಿತ್ತಲ್ಲ. ಇದರ ಸ್ಪಷ್ಟ ಅರಿವಿದ್ದೂ ಎಷ್ಟು ಮಂದಿ ಇದರ ವಿರುದ್ಧ ಹೋರಾಟ ನಡೆಸಿದ್ದಾರೆ. ಒಂದು ವೇಳೆ ಜನ ಸಕಾಲದಲ್ಲಿ ಎಚ್ಚೆತ್ತುಕೊಂಡಿದ್ದರೆ ನಗರದಲ್ಲಿ 35 ಸಾವಿರಕ್ಕೂ ಅಧಿಕ ಅಸುರಕ್ಷಿತ ಕಟ್ಟಡಗಳು ನಿರ್ಮಾಣವಾಗುತ್ತಿದ್ದವೇ’ ಎಂದು ಪ್ರಶ್ನೆ ಮಾಡುತ್ತಾರೆ ಅವರು.

‘ನಾಲ್ಕೈದು ಮಹಡಿ ನಿರ್ಮಾಣವಾದ ಬಳಿಕ ಪರಿತಪಿಸುವ ಬದಲು ಪಾಯದ ಹಂತದಲ್ಲೇ ಅದನ್ನು ತಡೆಯಬೇಕು. ಪಾಯದ ಕೆಲಸ ಮುಗಿದ ಬಳಿಕ ಅದಕ್ಕೆ ಆರಂಭಿಕ ಪ್ರಮಾಣ‍ಪತ್ರ ನೀಡಲಾಗುತ್ತದೆ. ಪಾಯವನ್ನು ಕಟ್ಟಡ ಯೋಜನೆಗೆ ಮಂಜೂರಾತಿ ಪಡೆದ ಬಳಿಕವೇ ನಿರ್ಮಿಸಲಾಗಿದೆಯೇ, ಯೋಜನೆ ಪ್ರಕಾರವೇ ಪಾಯ ನಿರ್ಮಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಸ್ಥಳೀಯರು ಸಂಬಂಧಪಟ್ಟ ವಾರ್ಡ್‌ ಎಂಜಿನಿಯರ್‌ಗೆ ದೂರು ನೀಡಬೇಕು’ ಎಂದರು.

‘ಜನ ಎಚ್ಚರ ವಹಿಸಿದರೆ ನಿಯಮ ಉಲ್ಲಂಘನೆ ತಡೆಯಬಹುದು ಎನ್ನುವುದಕ್ಕೆ ಬನಶಂಕರಿ ಬಡಾವಣೆಯ ಎರಡನೇ ಹಂತ ಉತ್ತಮ ಉದಾಹರಣೆ. ಇಲ್ಲಿ ಯಾರಾದರೂ ನಿಯಮ ಉಲ್ಲಂಘಿಸಿ ಬಹುಮಹಡಿ ಕಟ್ಟಡ ನಿರ್ಮಿಸಲು ಮುಂದಾದರೂ ಜನರೇ ಒಟ್ಟಾಗಿ ಕಡಿವಾಣ ಹಾಕುತ್ತಾರೆ. ಇಲ್ಲೂ ನಿಯಮ ಮೀರಿ ಎರಡು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವ ಪ್ರಯತ್ನ ನಡೆದಿತ್ತು. ಜನರೇ ಆಕ್ಷೇಪ ವ್ಯಕ್ತಪಡಿಸಿ ಅದನ್ನು ತಡೆದರು’ ಎಂದು ಅವರು ಉದಾಹರಣೆ ನೀಡಿದರು.

‘ಬಹುಮಹಡಿ ಕಟ್ಟಡ ಯೋಜನೆಗಳಿಗೆ ಮಂಜೂರಾತಿ ನೀಡುವ ಮುನ್ನ ಅಧಿಕಾರಿಗಳು ಅದು ನಿರ್ಮಾಣವಾಗುವ ಪ್ರದೇಶದ ಒಳಚರಂಡಿ, ರಸ್ತೆಯ ಅಗಲ, ವಾಹನ ದಟ್ಟಣೆ ಸ್ಥಿತಿಗತಿಗಳನ್ನೆಲ್ಲ ನೋಡಿಕೊಳ್ಳಬೇಕು. ಅವರು ಅದನ್ನು ಪರಿಗಣಿಸದೆಯೇ ಮಂಜೂರಾತಿ ನೀಡಿದರೆ, ಜನರು ಒಟ್ಟಾಗಿ ಧ್ವನಿ ಎತ್ತಬೇಕು’ ಎಂದರು.

‘ನಿರಂತರ ತಪಾಸಣೆಗಾಗಿ ತಜ್ಞರ ತಂಡ’

‘ಸ್ವಾಧೀನಾನುಭವ ಪ್ರಮಾಣಪತ್ರ ನೀಡಿದ ಆ ಕಟ್ಟಡವನ್ನು ತಪಾಸಣೆ ನಡೆಸುವ ಪರಿಪಾಠ ಇಲ್ಲ. ಹಾಗಾಗಿ ಗಗನಚುಂಬಿ ಕಟ್ಟಡಗಳು ಸದೃಢವಾಗಿವೆಯೇ ಎಂಬುದನ್ನು ಪರಿಶೀಲನೆ ನಡೆಸುವ ಪದ್ಧತಿಯನ್ನು ಆರಂಭಿಸಬೇಕಿದೆ. ಹಳೆ ಕಟ್ಟಡಗಳನ್ನು ಪರಿಶೀಲಿಸಲು ತಜ್ಞರ ತಂಡ ರಚಿಸುವ ಕುರಿತು ಪರಿಶೀಲಿಸುತ್ತೇವೆ’ ಎಂದು ಬಿಬಿಎಂಪಿ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಎಸ್‌.ಜಿ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುಮಹಡಿ ಕಟ್ಟಡ ನಿರ್ಮಿಸುವ ಸ್ಥಳದ ಮಣ್ಣಿನ ಪರೀಕ್ಷೆ ವರದಿ ಪಡೆಯುವುದನ್ನು, ಸ್ಟಕ್ಚರಲ್‌ ವಿನ್ಯಾಸ ಪರಿಶೀಲನೆಯನ್ನು ಕಡ್ಡಾಯವಾಗಿ ನಡೆಸಿದರೆ ಅನಾಹುತಗಳನ್ನು ತಡೆಯಬಹುದು. ಇವುಗಳ ನಿರ್ಮಾಣದ ಆರಂಭದ ಹಂತದಲ್ಲೇ ದಿಢೀರ್‌ ತಪಾಸಣೆ ನಡೆಸಬೇಕಾದ ಅಗತ್ಯವಿದೆ. ನಿಯಮ ಪಾಲನೆ ಆಗದಿದ್ದರೆ ದಂಡ ವಿಧಿಸುವ ಚಿಂತನೆಯೂ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.