ADVERTISEMENT

ಬಿಎಂಟಿಸಿ: ‘ಮಹಿಳೆಯರಿಗೆ ಉಚಿತ ಬಸ್‌ಪ್ರಯಾಣ ಸೌಲಭ್ಯ ನೀಡಿ’

ಬಸ್‌ ಟಿಕೆಟ್‌ ದರ ಹೆಚ್ಚಳ ಬೇಡ: ಬಿಎಂಟಿಸಿ ಬಸ್‌ ಪ್ರಯಾಣಿಕರ ವೇದಿಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 3:52 IST
Last Updated 4 ಮಾರ್ಚ್ 2021, 3:52 IST

ಬೆಂಗಳೂರು: ‘ದೆಹಲಿ ಸರ್ಕಾರ ಸಾರ್ವಜನಿಕ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸಿದೆ. ಅದೇ ರೀತಿ ಬಿಎಂಟಿಸಿ ಬಸ್‌ಗಳಲ್ಲಿಯೂ ಮಹಿಳೆಯರಿಗೆ ಈ ಸೌಲಭ್ಯ ಒದಗಿಸಬೇಕು’ ಎಂದು ಬಿಎಂಟಿಸಿ ಬಸ್‌ ಪ್ರಯಾಣಿಕರ ವೇದಿಕೆ ಒತ್ತಾಯಿಸಿದೆ.

ನಗರದಲ್ಲಿ ಸಾರ್ವಜನಿಕ ಬಸ್‌ ಸಂಚಾರ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅಗತ್ಯ ಕ್ರಮಗಳನ್ನು ಘೋಷಿಸಬೇಕು ಎಂದು ವೇದಿಕೆಯು ಪ್ರಸ್ತಾವ ಸಲ್ಲಿಸಿದೆ.

‘ದೆಹಲಿ ಸರ್ಕಾರವು 2019ರಲ್ಲಿ ಡಿಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಿದೆ. ಈ ಉಪಕ್ರಮವು
ಅತ್ಯಂತ ಜನಪ್ರಿಯತೆ ಗಳಿಸಿದ್ದು, ನಗರ ಬಡವರಿಗೆ ಒಂದು ದೊಡ್ಡ ಪರಿಹಾರ ಒದಗಿಸಿದಂತಾಗಿದೆ’ ಎಂದು ವೇದಿಕೆ ಹೇಳಿದೆ.

ADVERTISEMENT

‘ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಸ್‌ನಲ್ಲಿ ಪ್ರಯಾಣಿಸುತ್ತಿರುವುದರಿಂದ ಪುರುಷರೂ ಅವರ ಜೊತೆಗೂಡುತ್ತಿದ್ದು, ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದಾರೆ. ಸಂಸ್ಥೆಗೆ ಆದಾಯವೂ ಹೆಚ್ಚುತ್ತಿದೆ’ ಎಂದು ವೇದಿಕೆಯ ವಿನಯ್‌ ಶ್ರೀನಿವಾಸ್ ಹೇಳಿದ್ದಾರೆ.

ಟಿಕೆಟ್‌ ದರ ಹೆಚ್ಚಳ ಬೇಡ:ಕೋವಿಡ್‌ ಸಂದರ್ಭದಲ್ಲಿ ಅನೇಕ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ವೇತನವಿಲ್ಲದೆ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಎಂಟಿಸಿ ಬಸ್‌ ಟಿಕೆಟ್‌ ದರ ಹೆಚ್ಚಿಸಬಾರದು ಎಂದು ವೇದಿಕೆ ಪ್ರಸ್ತಾವ ಸಲ್ಲಿಸಿದೆ.

‘ಬಡವರಿಗೆ ನಗರದಲ್ಲಿ ಕೆಲಸಕ್ಕೆ ಹೋಗುವುದು ಹಾಗೂ ಶಿಕ್ಷಣ ಪಡೆಯುವುದು ಕಷ್ಟವಾಗುತ್ತಿದೆ. ಎಲ್ಲ ಕಚೇರಿಗಳು ಮತ್ತು ಶಾಲಾ–ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಂಡರೆ ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳಲಿದೆ. ಎಲ್ಲರಿಗೂ ಕೈಗೆಟಕುವ ದರಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು’ ಎಂದು ಅದು ಹೇಳಿದೆ.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಎಂಟಿಸಿಗೆ ಡೀಸೆಲ್ ಅನ್ನು ಕಡಿಮೆ ದರದಲ್ಲಿ ಒದಗಿಸುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದೂ ವೇದಿಕೆ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.