ADVERTISEMENT

‘ಪ್ರಗತಿಯ ಪ್ರತಿಮೆ’ ಅನಾವರಣಕ್ಕೆ ಬಸ್‌: ಪಾವತಿಯಾಗದ ಹಣ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 16:31 IST
Last Updated 11 ಜನವರಿ 2023, 16:31 IST
   

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸ್ಥಾಪಿಸಲಾಗಿರುವ ನಾಡಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ ಅನಾವರಣ ಕಾರ್ಯಕ್ರಮಕ್ಕೆ ಬಿಎಂಟಿಸಿ ಒದಗಿಸಿದ್ದ 2,399 ಬಸ್‌ಗಳಿಗೆ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈವರೆಗೂ ಹಣ ಪಾವತಿಯಾಗಿಲ್ಲ.

ನ.11ರಂದು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಈ ಕಾರ್ಯಕ್ರಮಕ್ಕೆ ಬಿಎಂಟಿಸಿ ಬಸ್‌ ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೌಖಿಕವಾಗಿ ಆದೇಶ ನೀಡಿದ್ದರು. ಅದರನ್ವಯ, 2,399 ಬಸ್‌ ಒದಗಿಸಬೇಕು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ನ.8ರಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು.

ಹಣ‍ ಪಾವತಿಗೆ ಸಂಬಂಧಿಸಿದಂತೆ ಬಿ.ಮಾಲತಿ ಅವರು, ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಕೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಬಿಎಂಟಿಸಿ ಸಾರ್ವಜನಿಕ ಮಾಹಿತಿ ಅಧಿಕಾರಿ, ‘ಪ್ರಾಧಿಕಾರದ ಆಯುಕ್ತರ ಪತ್ರದಂತೆ ಬಿಎಂಟಿಸಿ ಬಸ್‌ಗಳನ್ನು ಸಾಂದರ್ಭಿಕ ಒಪ್ಪಂದದಂತೆ ಒದಗಿಸಲಾಗಿತ್ತು. ಈ ಬಸ್‌ಗಳಿಗೆ ಹಣ ಪಾವತಿಸುವಂತೆ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಈವರೆಗೆ ಹಣ ಪಾವತಿ ಆಗಿಲ್ಲ’ ಎಂದು ವಿವರ ಒದಗಿಸಿದ್ದಾರೆ.

ADVERTISEMENT

‘ಪ್ರಗತಿಯ ಪ್ರತಿಮೆ ಅನಾವರಣ ಕಾರ್ಯಕ್ರಮ ದೊಡ್ಡಮಟ್ಟದ್ದಾಗಿದ್ದು, ಅದನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ವಹಿಸಲಾಗಿತ್ತು. ಬಿಎಂಟಿಸಿ ಬಸ್‌ಗಳ ಒಪ್ಪಂದದ ಹಣವನ್ನೂ ಲೋಕೋಪಯೋಗಿ ಇಲಾಖೆ ಪಾವತಿಸಲಿದೆ. ನಾಲ್ಕೈದು ದಿನದಲ್ಲಿ ಸಂದಾಯವಾಗಲಿದೆ’ ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಯ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.