
ಬೆಂಗಳೂರು: ‘ಸಮಾಜದಲ್ಲಿ ಇಂದು ದೇವರು ಮತ್ತು ಧರ್ಮದ ಹೆಸರಿನಲ್ಲಿ ವ್ಯಾಪಾರ ನಡೆಯುತ್ತಿದೆ’ ಎಂದು ಲೇಖಕಿ ಬಿ.ಟಿ. ಲಲಿತಾ ನಾಯಕ್ ಬೇಸರ ವ್ಯಕ್ತಪಡಿಸಿದರು.
ರಂಗೋತ್ರಿ ಮಕ್ಕಳ ರಂಗಶಾಲೆ ನಗರದಲ್ಲಿ ಗುರುವಾರ ಹಮ್ಮಿಕೊಂಡ ಶೀಲಾದೇವಿ ಎಸ್. ಮಳೀಮಠ ಅವರ 60ರ ಅಭಿನಂದನಾ ಸಮಾರಂಭದಲ್ಲಿ ಅವರಿಗೆ ‘ಜಂಗಮಶ್ರೀ ಬಿರುದು’ ನೀಡಿ, ಗೌರವಿಸಲಾಯಿತು.
‘ಸರ್ಕಾರಗಳು ಎಲ್ಲವನ್ನೂ ಖಾಸಗಿಯವರಿಗೆ ಮಾರಾಟ ಮಾಡುತ್ತಿವೆ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರ್ಕಾರದ ಸರ್ವಾಧಿಕಾರ ಮನೋಭಾವದ ವಿರುದ್ಧ ಧ್ವನಿಯೆತ್ತಬೇಕಿದೆ. ನಮಗೂ ಸರ್ಕಾರಕ್ಕೂ ಸಂಬಂಧವಿಲ್ಲವೆಂದು ಸುಮ್ಮನಾದರೆ ಪ್ರಜಾಪ್ರಭುತ್ವದಲ್ಲಿ ಇರಲು ನಾವು ಲಾಯಕ್ಕಲ್ಲ’ ಎಂದು ಬಿ.ಟಿ. ಲಲಿತಾ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.
‘ಸಮಾಜದಲ್ಲಿ ನಡೆಯುತ್ತಿರುವ ರಾಜಕೀಯವನ್ನು ಸರಿಯಾದ ರೀತಿಯಲ್ಲಿ ಗುರುತಿಸುವಂತಹ ಜನರು ಕಡಿಮೆ ಆಗುತ್ತಿದ್ದಾರೆ. ಇನ್ಯಾವುದಕ್ಕೋ ಜನರು ಮರುಳಾಗುತ್ತಿದ್ದಾರೆ. ನೈಜ ಧರ್ಮದ ಬಗ್ಗೆ ಆಲೋಚನೆ ಮಾಡುವವರ ಕೊರತೆ ಈ ಸಮಾಜದಲ್ಲಿದ್ದು, ಧರ್ಮವು ಬೇರೆ ಬೇರೆ ರೀತಿಯಲ್ಲಿ ವಿಕೃತಗೊಳ್ಳುತ್ತಿದೆ’ ಎಂದು ಹೇಳಿದರು.
ಬೇಲಿಮಠದ ಶಿವರುದ್ರ ಸ್ವಾಮೀಜಿ, ‘ಅರವತ್ತರ ಅರಿವು ಎನ್ನುವಂತಹದ್ದು ಎಲ್ಲರ ಬಾಳಿನಲ್ಲಿ ಪ್ರೇರಕ ಶಕ್ತಿಯಾಗಿ ಹರಡುವ ಅವಕಾಶ. ಇದು ವಿಶ್ರಾಂತಿಯ ಬದಲು, ವಿಜೃಂಭಣೆಯ ಸಮಯ. ಈವರೆಗೂ ಗಳಿಸಿದ ಸಾಧನಾ ಶಕ್ತಿಯನ್ನು ಎಲ್ಲರಿಗೂ ಹಂಚಿ, ಸುಗಂಧ ಬೀರುವ ಸುಸಮಯ ಇದಾಗಿದೆ. ಅಧ್ಯಾಪಕರು ಎಂದಿಗೂ ನಿವೃತ್ತರಾಗುವುದಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.